ನವದೆಹಲಿ, ಮೇ.14 (DaijiworldNews/PY): ಅಂಧ ದಂಪತಿಗಳು ತಮ್ಮ 9 ತಿಂಗಳ ಕಂದಮ್ಮನನ್ನು ಕಳೆದುಕೊಂಡ ಘಟನೆ ದೆಹಲಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಅಂಧ ದಂಪತಿಗಳು ತಿಂಗಳ ಪುತ್ರ ಕ್ರಿಷು ಕೊರೊನಾ ಸೋಂಕಿಗೆ ಬಲಿಯಾಗಿದ್ದಾನೆ. ಮೃತ ಮಗುವಿನ ತಂದೆ ಕೊರೊನಾ ಸೋಂಕಿಗೆ ತುತ್ತಾಗಿ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಗು ಮೃತಪಟ್ಟಿರುವ ವಿಚಾರ ಅವರಿಗೆ ತಿಳಿದೇ ಇಲ್ಲ.
"ನನ್ನ ಪತಿಗೆ ಮಗು ಕಳೆದುಕೊಂಡಿರುವ ವಿಷಯವನ್ನು ತಿಳಿಸಬೇಡಿ. ಈ ವಿಚಾರ ತಿಳಿದಿಲ್ಲ. ಮಗುವನ್ನು ಕಳೆದುಕೊಂಡ ವಿಚಾರ ಅವರಿಗೆ ತಿಳಿದರೆ ಅವರನ್ನು ಕಳೆದುಕೊಳ್ಳಬೇಕಾಗುತ್ತದೆ" ಎಂದು ಮಗುವಿನ ತಾಯಿ ಜ್ಯೋತಿ ಕಣ್ಣೀರು ಹಾಕಿದ್ದಾರೆ.
ಮಾಜಿ ಬಿಜೆಪಿ ಶಾಸಕ ಜಿತೇಂದರ್ ಸಿಂಗ್ ಅವರು ಸೀಮಾಪುರಿ ರುದ್ರಭೂಮಿಯಲ್ಲಿ ಮಗುವಿನ ಅಂತ್ಯಸಂಸ್ಕಾರ ನಡೆಸಿದ್ದು, ಮಾನವೀಯತೆ ಮೆರೆದಿದ್ದಾರೆ. ಇತ್ತೀಚೆಗಷ್ಟೇ ಇವರು ಐದು ತಿಂಗಳ ಮಗುವಿನ ಅಂತ್ಯಸಂಸ್ಕಾರ ನೆರವೇರಿಸಿದ್ದರು.
"ಪೂರ್ವ ದೆಹಲಿಯ ದಿಲ್ಷಾನ್ ಗಾರ್ಡನ್ನಲ್ಲಿ ವಾಸಿಸುತ್ತಿರುವ ಈ ಅಂದ ಪೋಷಕರಿಗೆ ಕ್ರಿಷು ಒಬ್ಬನೇ ಮಗ. ಕೃಷುವಿನ ತಾಯಿ ಜ್ಯೋತಿಗೆ ಕಳೆದ 18 ದಿನಗಳ ಹಿಂದೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಈ ವೇಳೆ ಮಗುವಿಗೆ ಎದೆಹಾಲು ಉಣಿಸಿದ ಕಾರಣ ಮಗುವಿಗೂ ಕೂಡಾ ಕೊರೊನಾ ಸೋಂಕು ತಗುಲಿದ್ದು, ಮಗು ಸಾವನ್ನಪ್ಪಿದೆ" ಎಂದು ಅಂಧ ದಂಪತಿಯ ಸಂಬಂದಿಕರು ತಿಳಿಸಿದ್ದಾರೆ.
ಕೊರೊನಾ ಸೋಂಕು ತಗುಲಿದ್ದ ಮಗುವನ್ನು ಗುರುತೇಜ್ಬಹದ್ದೂರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಗು ಮೃತಪಟ್ಟಿದೆ. ಕೃಷುವಿನ ತಂದೆ ಶಶಾಂಕ್ ಶೇಖರ್ಗೂ ಕೂಡಾ ಸೋಂಕು ತಗುಲಿದ್ದು, ಅವರನ್ನು ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.