ಬೆಂಗಳೂರು,ಮೇ.14 (DaijiworldNews/HR): ಕೊರೊನಾ ನಿರ್ವಹಣೆ ಕುರಿತು ನ್ಯಾಯಾಲಯದ ನೀಡುತ್ತಿರುವ ಆದೇಶಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನೀಡಿರುವ ಹೇಳಿಕೆಗಳ ವಿಡಿಯೋ ತುಣುಕನ್ನು ವಕೀಲ ಜಿ.ಆರ್.ಮೋಹನ್, ಹೈಕೋರ್ಟ್ ರಿಜಿಸ್ಟ್ರಾರ್ ಜುಡಿಷಿಯಲ್ ಅವರಿಗೆ ಇ-ಮೇಲ್ ಮೂಲಕ ರವಾನಿಸಿ ಪ್ರಕರಣ ದಾಖಲಿಸಲು ಮನವಿ ಮಾಡಿಕೊಂಡಿದ್ದಾರೆ.
ಈ ಇಬ್ಬರು ನಾಯಕರು ನೀಡಿರುವ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯನ್ಯಾಯಮೂರ್ತಿಗಳಲ್ಲಿ ಮನವಿ ಮಾಡುತ್ತಿರುವುದಾಗಿ ಅವರು ಇ-ಮೇಲ್ನಲ್ಲಿ ತಿಳಿಸಿದ್ದಾರೆ.
ಕೊರೋನಾ ನಿರ್ವಹಣೆ ಸಂಬಂಧ ಹೈಕೋರ್ಟ್ ನೀಡುತ್ತಿರುವ ಸೂಚನೆ, ಆದೇಶಕ್ಕೆ ಸಂಬಂಧಿಸಿದಂತೆ ಡಿ.ವಿ.ಸದಾನಂದಗೌಡ ಹಾಗೂ ಸಿ.ಟಿ.ರವಿ 'ನ್ಯಾಯಾಧೀಶರು ಸರ್ವಜ್ಞರಲ್ಲ'ಎಂದು ನೀಡಿರುವ ಹೇಳಿಕೆಗಳಿಗೆ ಬೆಂಗಳೂರು ವಕೀಲರ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.