ಬೆಳಗಾವಿ 14(DaijiworldNews/MS):ಬಿಜೆಪಿ ಸುಳ್ಳಿನ ಕಾರ್ಖಾನೆ ಎಂದು ವ್ಯಂಗ್ಯವಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಡಿಸಿಎಂ ಗೋವಿಂದ ಕಾರಜೋಳ ಟಾಂಗ್ ನೀಡಿದ್ದಾರೆ. ಬೆಳಗಾವಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಸಾವಿನ ವಿಚಾರದಲ್ಲಿ ಸಿದ್ದರಾಮಯ್ಯ ರಾಜಕೀಯ ಮಾಡಬಾರದು ಎಂದು ಹೇಳಿದರು.
ಸದ್ಯದ ಪರಿಸ್ಥಿತಿಯಲ್ಲಿ ಮಾನವ ಕುಲಕ್ಕೆ ದೊಡ್ಡ ಸಂಚಕಾರ ಎದುರಾಗಿದೆ. ಈ ಸಂದಿಗ್ದ ಪರಿಸ್ಥಿತಿಯನ್ನು ಎಲ್ಲರೂ ಸೇರಿ ಎದುರಿಸಬೇಕಾಗಿದೆ. ಸಾವಿನ ಮನೆಯಲ್ಲಿ ಸಿದ್ದರಾಮಯ್ಯ ರಾಜಕೀಯ ಮಾಡಲು ಹೋಗಬಾರದು. ಸಿದ್ದರಾಮಯ್ಯ ಈ ಹಿಂದೆ ರಾಜ್ಯದ ಸಿಎಂ ಆಗಿದ್ದವರು. ಅನುಭವಸ್ಥರು. ಹೀಗಾಗಿ ಪ್ರತಿಪಕ್ಷ ನಾಯಕನ ಸ್ಥಾನದಲ್ಲಿರುವ ಯಾವಾಗ ಸಿದ್ದರಾಮಯ್ಯ ಸರ್ಕಾರಕ್ಕೆ ಒಳ್ಳೆಯ ಸಲಹೆಗಳನ್ನ ನೀಡಲಿ, ಉತ್ತಮ ಸಲಹೆ ಸ್ವೀಕಾರ್ಹ ಎಂದು ಹೇಳಿದರು.
ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದ ಜೊತೆಯಲ್ಲಿ ಕೈಜೋಡಿಸಲಿ. ರಾಜ್ಯದಲ್ಲಿ ಸಾವು - ನೋವುಗಳ ಸಂಖ್ಯೆಯನ್ನ ತಪ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿ. ಇದೆಲ್ಲವನ್ನ ಬಿಟ್ಟು ರಾಜಕೀಯ ಮಾಡುತ್ತಾ ಕುಳಿತುಕೊಳ್ಳಬೇಡಿ ಎಂದು ಕುಟುಕಿದರು.