ಉತ್ತರಖಾಂಡ, ಮೇ 14(DaijiworldNews/MS): ಕೋವಿಡ್ -19 ಗೆ ಕಾರಣವಾಗುವ ವೈರಸ್ ಸರ್ಸ್-ಕೋವ್ -2 ಗೆ “ಬದುಕುವ ಹಕ್ಕಿದೆ” ಯಾಕೆಂದರೆ ವಿಶ್ವದಲ್ಲಿ ಪ್ರತಿ ಜೀವಿಗೂ ಬದುಕುವ ಹಕ್ಕಿದೆ. ಹೀಗಾಗಿ ಕೊರೊನಾ ವೈರಸ್ ಸಹ ಜೀವಿಯಾಗಿದ್ದು, ಅದಕ್ಕೂ ಜೀವಿಸುವ ಹಕ್ಕಿದೆ' ಎಂದು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅಭಿಪ್ರಾಯ ಪಟ್ಟಿದ್ದಾರೆ. ಅವರ ಹೇಳಿಕೆಯು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗೆ ಗುರಿಯಾಗಿದೆ.
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಾವತ್, "ನಾವು ತಾತ್ವಿಕ ದೃಷ್ಟಿಕೋನದಿಂದ ಮಾತನಾಡಿದರೆ, ಕೋವಿಡ್ -19 ವೈರಸ್ ಕೂಡ ಜೀವಂತ ಜೀವಿ, ಅದು ಬದುಕಲು ಬಯಸುತ್ತದೆ, ಉಳಿದ ಎಲ್ಲರಂತೆ ಅದಕ್ಕೂ ಜೀವಿಸುವ ಹಕ್ಕಿದೆ ಆದರೆ ಮನುಷ್ಯರು ಜೀವಿಗಳಿಗಿಂತ ಹೆಚ್ಚು ಬುದ್ಧಿವಂತರು ಎಂದು ಭಾವಿಸುತ್ತೇವೆ ಹಾಗೂ ಅದನ್ನು ಕೊನೆಗಾಣಿಸಲು ಪ್ರಯತ್ನಿಸುತ್ತಿದ್ದೇವೆ. ಹಾಗಾಗಿ ಅದು ತಾನಾಗಿಯೇ ನಿರಂತರವಾಗಿ ರೂಪಾಂತರಗೊಳ್ಳುತ್ತಿದೆ" ಎಂದು ವಿಶ್ಲೇಷಿಸಿದ್ದಾರೆ.
ವ್ಯಾಪಕವಾಗಿ ಪ್ರಚಾರವಾದ ವಿಡಿಯೋ ಕ್ಲಿಪ್ನಲ್ಲಿ ರಾವತ್ ಮುಂದುವರಿದು, “ಆದ್ದರಿಂದ, ನಾವು ಈಗ ಅದರಿಂದ ದೂರವಿರಬೇಕು. ಅದು ಕೂಡ ಚಲಿಸುತ್ತಿದೆ , ನಾವೂ ಚಲಿಸುತ್ತಿದ್ದೇವೆ, ಆದರೆ ನಾವು ಅದಕ್ಕಿಂತ ವೇಗವಾಗಿ ಚಲಿಸಬೇಕಾಗಿದೆ ಇದರಿಂದ ವೈರಸ್ ಹಿಂದೆ ಉಳಿಯುತ್ತದೆ" ಎಂದು ಹೇಳಿದ್ದಾರೆ
ದೇಶದಲ್ಲಿ ಕೊರೊನಾ ವೈರಸ್ನ ಎರಡನೇ ಅಲೆ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿಯ ಮುಖಂಡ ನೀಡಿರುವ ಈ ಹೇಳಿಕೆಯು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗಿದೆ. 'ಈ ಜೀವಂತ ವೈರಸ್ಗೆ ಸೆಂಟ್ರಲ್ ವಿಸ್ತಾದಲ್ಲಿ ಸೂರು ಒದಗಿಸಬೇಕು' ಎಂದು ಟ್ವೀಟಿಗರು ವ್ಯಂಗ್ಯವಾಡಿದ್ದಾರೆ.'ಇದು ಅಸಂಬದ್ಧ ಮತ್ತು ಮೂರ್ಖತನವಾಗಿದೆ. ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಕಾಂಗ್ರೆಸ್ ಮುಖಂಡರೊಬ್ಬರು ಲೇವಡಿ ಮಾಡಿದ್ದಾರೆ.