ಬೆಂಗಳೂರು, ಮೇ.13 (DaijiworldNews/HR): ಕೊರೊನಾ ಪಾಸಿಟಿವ್ ವರದಿ ಬಂದು ಹೋಮ್ ಐಸೋಲೇಷನ್ ಆದ ಒಂದು ಗಂಟೆಯೊಳಗೆ ಅವರ ಮನೆಗೆ ಮೆಡಿಕಲ್ ಕಿಟ್ ತಲುಪಿಸಲಾಗುವುದು ಎಂದು ರಾಜ್ಯ ಕೊರೊನಾ ಕಾರ್ಯಪಡೆ ಅಧ್ಯಕ್ಷ, ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕರ್ನಾಟಕದಲ್ಲಿ ಕಿಟ್ ಗಳಿಗೆ ಹೆಚ್ಚು ಬೇಡಿಕೆ ಇದ್ದು, ತಕ್ಷಣವೇ 5 ಲಕ್ಷ ಮೆಡಿಕಲ್ ಕಿಟ್ಗಳನ್ನು ಖರೀದಿ ಮಾಡಲು ಸರಕಾರ ನಿರ್ಧರಿಸಿದೆ. ಅಗತ್ಯಬಿದ್ದರೆ ಇನ್ನೂ ಅಧಿಕ ಕಿಟ್ ಖರೀದಿ ಮಾಡಲಾಗುವುದು" ಎಂದರು.
"ಮನೆಗಳಲ್ಲಿಯೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಲಾಗಿದ್ದು, ಈ ಮೆಡಿಕಲ್ ಕಿಟ್ ನಲ್ಲಿ ರೋಗ ಮತ್ತು ಸೋಂಕು ನಿರೋಧಕ ಔಷಧಗಳು, ವೈರಸ್ ನಿರೋಧಕ, ವಿಟಮಿನ್ ಟ್ಯಾಬ್ಲೆಟ್ ಸೇರಿದಂತೆ ರೋಗ ಉಲ್ಬಣವಾಗುವುದನ್ನು ತಡೆಯುವ ಎಲ್ಲ ಔಷಧಗಳೂ ಇರುತ್ತವೆ" ಎಂದಿದ್ದಾರೆ.
ಇನ್ನು "ಸೋಂಕಿತರಿಗೆ ಅತ್ಯಗತ್ಯವಾಗಿ ಬೇಕಾಗಿರುವ 'ಕಾಲ್ಟಿಸಿನ್' ಮಾತ್ರೆಯೂ ಇರಲಿದ್ದು, 10 ದಿನಕ್ಕೆ ಆಗುವಷ್ಟು ಔಷಧಿ ಕಿಟ್ ನಲ್ಲಿ ಇರುತ್ತದೆ. ಜತೆಗೆ ಟೆಲಿ ಕನ್ಸಲ್ ಟೆನ್ಸಿ ಸೌಲಭ್ಯವೂ ಇರುತ್ತದೆ" ಎಂದು ತಿಳಿಸಿದ್ದಾರೆ.