ನವದೆಹಲಿ, ಮೇ 13 (DaijiworldNews/MS): ಕೊರೊನಾ ಸಾಂಕ್ರಾಮಿಕ ರೋಗದ ಎರಡನೇ ಅಲೆಯೂ ಭಾರತವನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಇದೇ ವೇಳೆ ಕೊರೊನಾದಿಂದ ಅಸಹಾಯಕತೆಗೊಳಗಾದವರ ಮೇಲೆ ಅಮಾನವೀಯ ವರ್ತನೆಗಳ ಘಟನೆಗಳು, ಕಿರುಕುಳಗಳು ಹೆಚ್ಚಾಗುತ್ತಿವೆ.ಈ ಸವಾಲಿನ ಸನ್ನಿವೇಶಗಳಲ್ಲಿ ಮಾನವೀಯತೆಯ ಬದಲು ಮೃಗೀಯ ವರ್ತನೆಗಳು ಕಾಣಸಿಗುತ್ತಿದೆ.
ದೇಶದಲ್ಲಿ ಆಮ್ಲಜನಕದ ಬಿಕ್ಕಟ್ಟು ಮುಂದುವರಿದಂತೆ, ಕೆಲವು ವ್ಯಕ್ತಿಗಳು ಕಾಸ್ಟಿಂಗ್ ಕೌಚ್ ನಂತೆ ಇನ್ನೊಬ್ಬರ ನೋವು ಮತ್ತು ಅಸಹಾಯಕತೆಯನ್ನು ಬಳಸುತ್ತಿದ್ದಾರೆ.
ಅಂತಹ ಆಘಾತಕಾರಿ ಘಟನೆಯೊಂದು ಟ್ವಿಟರ್ ಬಳಕೆದಾರರ ಮೂಲಕ ಹೊರಬಿದ್ದಿದೆ.ಈ ಬಳಕೆದಾರರ ಪೋಸ್ಟ್ ಸಾವಿರಾರು ಜನರನ್ನು ತಲ್ಲಣಗೊಳಿಸಿದೆ.
ಮೇ 11 ರಂದು ಭಾವ್ರೀನ್ ಕಂಧಾರಿ ಎಂಬವರು ಟ್ವೀಟ್ ಮಾಡಿದ್ದು, " ನನ್ನ ಪುಟ್ಟ ತಂಗಿಯಂತಿರುವ, ಸ್ನೇಹಿತೆಯ ಸಹೋದರಿಯೂ ಕೊರೊನಾ ಪೀಡಿತ ತನ್ನ ತಂದೆಗೆ ತೀರಾ ಅಗತ್ಯವಿರುವ ಆಮ್ಲಜನಕ ಸಿಲಿಂಡರ್ಗಾಗಿ ಪ್ರತಿಷ್ಟಿತ ಕಾಲೋನಿಯಲ್ಲಿರುವ ನೆರೆಮನೆಯಾತನ ಬಳಿ ಕೇಳಿದರೆ ಆತ ಅದಕ್ಕೆ ಬದಲಾಗಿ ತನ್ನೊಂದಿಗೆ ಮಲಗುವಂತೆ ಹೇಳಿದ್ದಾನೆ " ಎಂದು ಬರೆದುಕೊಂಡಿದ್ದಾರೆ. " ಯಾವ ಕ್ರಮ ತೆಗೆದುಕೊಳ್ಳಬಹುದು ಏಕೆಂದರೆ " ಬಿ* " ಯೂ ಸ್ಪಷ್ಟವಾಗಿ ನಿರಾಕರಿಸುತ್ತಾನೆ ಅಲ್ಲವೇ " ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಓದಿದ ಅನೇಕ ಬಳಕೆದಾರರು, ಆಕ್ರೋಶವನ್ನು ಹೊರಹಾಕಿದ್ದು, ಸಾವಿರಾರು ಜನರು ಕಮೆಂಟ್ ಗಳ ಮೂಲಕ ತಮ್ಮಅಸಮಾಧಾನವನ್ನು ಹೊರಹಾಕಿದ್ದಾರೆ. ಅನೇಕ ಬಳಕೆದಾರರು ಅಪರಾಧ ಮಾಡಿದವರ ಹೆಸರನ್ನು ಬಹಿರಂಗಪಡಿಸಿ ಎಂದು ಒತ್ತಾಯಿಸಿದ್ದು, ಇತರರು ಪೊಲೀಸ್ ದೂರು ದಾಖಲಿಸುವುದು ಉತ್ತಮ ಮಾರ್ಗವಾಗಿದೆ ಎಂದು ಹೇಳಿದ್ದಾರೆ.