ಬೆಂಗಳೂರು, ಮೇ 13 (DaijiworldNews/MB) : ''ನಾಳೆಯೇ ಲಸಿಕೆ ನೀಡಬೇಕು ಎಂದು ಹೈಕೋರ್ಟ್ ಹೇಳುತ್ತೆ. ಆದರೆ ಕಂಪನಿಗಳು ಲಸಿಕೆ ಉತ್ಪಾದನೆ ಮಾಡದಿದ್ರೆ ನಾವು ನೇಣು ಹಾಕೋಬೇಕಾ'' ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಪ್ರಶ್ನಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಕೆಲವು ರಾಷ್ಟ್ರಗಳಿಂದ ಕಚ್ಚಾ ಸಾಮಗ್ರಿ ಬರುವುದು ತಡವಾದ ಹಿನ್ನೆಲೆ ಲಸಿಕೆ ತಯಾರಿಕೆ ಕುಂಠಿತವಾಗಿದೆ. ಏತನ್ಮಧ್ಯೆ ಕೋರ್ಟ್ ನಾಳೆ ಲಸಿಕೆ ಕೊಡಿ ಎಂದು ಹೇಳಿದರೆ ನಾವು ಹೇಗೆ ಕೊಡುವುದು?'' ಎಂದು ಪ್ರಶ್ನಿಸಿದ್ದು ಮಾತ್ರವಲ್ಲದೇ, ''ಲಸಿಕೆಯ ಉತ್ಪಾದನೆಯೇ ಆಗದಿದ್ದರೆ ನಾವು ನೇಣು ಹಾಕಿಕೊಳ್ಳಲು ಆಗುತ್ತದಾ'' ಎಂದು ಸಿಡಿಮಿಡಿಗೊಂಡಿದ್ದಾರೆ. ''ಅಷ್ಟಕ್ಕೂ ನಾವೇನು ಸಾಂಕ್ರಾಮಿಕವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ'' ಎಂದು ಕೂಡಾ ಹೇಳಿದ್ದಾರೆ.
''ಮೊದಲು 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಸಂದರ್ಭ ವಿಪಕ್ಷದವರ ಅಪಪ್ರಚಾರದಿಂದಾಗಿ ಶೇ 52ರಷ್ಟ ಮಂದಿ ಮಾತ್ರ ಲಸಿಕೆ ಪಡೆದರು. ಈ ಹಿನ್ನೆಲೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೋಡಲು ನಿರ್ಧಾರ ಮಾಡಿದೆವು. ಆದರೆ ಈಗ ಎರಡನೇ ಕೊರೊನಾ ಅಲೆಯ ಕಾರಣದಿಂದಾಗಿ ಹೆಚ್ಚಿನ ಜನರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬಂದಿದ್ದಾರೆ. ಈ ಕಾರಣದಿಂದಾಗಿ ಒಮ್ಮೆಲೇ ಲಸಿಕೆ ಕೊರತೆಯಾಗಿದೆ'' ಎಂದು ಸ್ಪಷ್ಟನೆ ನೀಡಿದ್ದಾರೆ. ''ಇನ್ನು ಕೆಲವೇ ದಿನದಲ್ಲಿ ಲಸಿಕೆ ಉತ್ಪಾದನೆ ಹೆಚ್ಚಳವಾಗಲಿದೆ'' ಎಂದೂ ಹೇಳಿದ್ದಾರೆ.
ಇನ್ನು ಆಮ್ಲಜನಕ ಕೊರತೆ ವಿಚಾರದಲ್ಲಿ ಮಾತನಾಡಿದ ಅವರು, ''ಈ ವಿಚಾರದಲ್ಲಿ ನಮ್ಮಿಂದ ತಪ್ಪು ಆಗಿದೆ. ಈ ತಪ್ಪಿನಿಂದ ಕೆಲವು ಕಡೆ ರೋಗಿಗಳು ಸಾವನ್ನಪ್ಪಿದ್ದಾರೆ. ಆದರೆ ಇದಕ್ಕೆ ರಾಜಕೀಯ ಬೆರೆಸುವುದು ಸರಿಯಲ್ಲ'' ಎಂದು ಹೇಳಿದ ಅವರು, ಕೊರೊನಾ ಮೊದಲ ಅಲೆಯ ಸಂದರ್ಭ ಆಕ್ಸಿಜನ್ ಕೊರತೆ ಇರಲಿಲ್ಲ. ಆದರೆ ಎರಡನೇ ಅಲೆಯ ಸಂದರ್ಭ ದಿಡೀರ್ ಆಕ್ಸಿಜನ್ ಕೊರತೆ ಕಾಣಿಸಿಕೊಂಡಿದೆ'' ಎಂದು ಒಪ್ಪಿಕೊಂಡರು.
ಇನ್ನು ಇದೇ ವೇಳೆ, ''ಕೇಂದ್ರ ಸರ್ಕಾರ ರಾಜ್ಯಕ್ಕೆ 1015 ಮೆಟ್ರಿಕ್ ಟನ್ ಆಕ್ಸಿಜನ್ ನಿಗದಿ ಮಾಡಿದೆ. ಅದರಲ್ಲಿ 500 ಮೆಟ್ರಿಕ್ ಟನ್ ಕಂಟೈನರ್ ಇಂದೇ ರಾಜ್ಯಕ್ಕೆ ಬರಲಿದೆ'' ಎಂದು ತಿಳಿಸಿದರು.