ಬೆಂಗಳೂರು, ಮೇ 13 (DaijiworldNews/MS): ಕೊವೀಡ್ ನಿರ್ವಹಣೆಯ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಮಾಡುತ್ತಿರುವ ಟೀಕಾ ಪ್ರಹಾರವನ್ನು ಮುಂದುವರಿಸಿರುವ ಕಾಂಗ್ರೆಸ್ , ರಾಜ್ಯ ಬಿಜೆಪಿಯಲ್ಲಿರುವುದು ತಿಕ್ಕಲು ಸಚಿವರು, ಪುಕ್ಕಲು ಸಂಸದರು ಹಾಗೂ ಲಸಿಕೆ, ಆಮ್ಲಜನಕ ಮತ್ತು ಔಷಧಿಗಳ ಜೊತೆಗೆ ಕಾಣೆಯಾಗಿರುವ ಪ್ರಧಾನಿ ಎಂದು ಕಿಡಿಕಾರಿದೆ.
ಈ ಬಗ್ಗೆ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದ್ದು, " ಬಿಜೆಪಿಯಲ್ಲಿರುವುದು ತಿಕ್ಕಲು ಸಚಿವರು, ಪುಕ್ಕಲು ಸಂಸದರು, ತಿಕ್ಕಲು ಸಚಿವರಿಗೆ ಪರಿಜ್ಞಾನ, ಇಚ್ಛಾಶಕ್ತಿಯಿಲ್ಲ,ಪುಕ್ಕಲು ಸಂಸದರಿಗೆ ಮೋದಿ ಎದುರು ನಿಂತು ರಾಜ್ಯಕ್ಕೆ ನ್ಯಾಯ ಸಲ್ಲಿಸುವ ಧೈರ್ಯವಿಲ್ಲ. ಆಕ್ಸಿಜನ್, ಲಸಿಕೆ, ರೆಮಿಡಿಸಿವಿರ್ ಎಲ್ಲದರಲ್ಲೂ ಮೋದಿಮೊಸ ಪ್ರಶ್ನಿಸದೆ ಜನರ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದೆ.
ಮತ್ತೊಂದು ಟ್ವೀಟ್ ನಲ್ಲಿ "ಕೋವಿಡ್ ವೈಫಲ್ಯದಲ್ಲಿ ವಿದೇಶಗಳ ಎದುರು ಹರಾಜಾಗುತ್ತಿರುವ ಮೋದಿ ಮಾನ ಉಳಿಸಲು ಯತ್ನಿಸುವ ಶ್ರಮವನ್ನು ಜನರ ಜೀವ ಉಳಿಸುವಲ್ಲಿ ಬಳಸುತ್ತಿಲ್ಲ. ಬಿಜೆಪಿ ಪಕ್ಷದ ಫೇಕ್ ಫ್ಯಾಕ್ಟರಿ ಐಟಿ ಸೆಲ್ 'ದಿ ಗಾರ್ಡಿಯನ್'ನ ದೇಸಿ ವರ್ಷನ್ 'ಡೈಲಿ ಗಾರ್ಡಿಯನ್' ಮಾಡುವ ಯತ್ನಗಳು ಬೆತ್ತಲಾಗಿ ಗಾಜಿನ ಮರೆಯಲ್ಲಿ ನಿಂತಂತೆ! ಕಾಣುತ್ತಲೇ ಇರುತ್ತದೆ ಎಂದು ವ್ಯಂಗವಾಡಿದೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯ ಟ್ವೀಟ್ ನ್ನು ಕನ್ನಡಕ್ಕೆ ಅನುವಾದಿಸಿ ಟ್ವಿಟ್ ಮಾಡಿರುವ ರಾಜ್ಯ ಕಾಂಗ್ರೆಸ್ " ಲಸಿಕೆ, ಆಮ್ಲಜನಕ ಮತ್ತು ಔಷಧಿಗಳ ಜೊತೆಗೆ ಪ್ರಧಾನ ಮಂತ್ರಿಯೂ ಕಾಣೆಯಾಗಿದ್ದಾರೆ.
ಕಾಣುತ್ತಿರುವುದು ಸೆಂಟ್ರಲ್ ವಿಸ್ತಾ ಯೋಜನೆ, ಔಷಧಿಗಳ ಮೇಲಿನ ಜಿಎಸ್ಟಿ ಮತ್ತು ಪ್ರಧಾನ ಮಂತ್ರಿಗಳ ತರಹೇವಾರಿ ಫೋಟೋಗಳು ಮಾತ್ರ ಎಂದು ಹೇಳಿದೆ.