ನವದೆಹಲಿ, ಮೇ 13 (DaijiworldNews/MB) : ದೆಹಲಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಡಿಮೆಯಾಗಿದೆ. ಈ ಕಾರಣದಿಂದಾಗಿ ಇಲ್ಲಿಗೆ ನೀಡಲಾಗುತ್ತಿರುವ ಹೆಚ್ಚುವರಿ ಆಮ್ಲಜನಕವನ್ನು ಬೇರೆ ರಾಜ್ಯಗಳಿಗೆ ಪೂರೈಸಬಹುದು ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಗುರುವಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ತಿಳಿಸಿದ್ದಾರೆ.
''ಕಳೆದ 24 ಗಂಟೆಯಲ್ಲಿ ದೆಹಲಿಯಲ್ಲಿ 10,400 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದೆ. ಪಾಸಿಟಿವ್ ಪ್ರಮಾಣವು ಶೇಕಡಾ 14 ರಷ್ಟಿದೆ. ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿದ್ದ ವೇಳೆ ರಾಷ್ಟ್ರ ರಾಜಧಾನಿಗೆ 700 ಮೆ.ಟನ್ ಆಮ್ಲಜನಕ ಬೇಕಾಗಿತ್ತು. ಆದರೆ ಈಗ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆ ಆಕ್ಸಿಜನ್ ಅಗತ್ಯ 582 ಮೆ.ಟನ್.ಗೆ ಇಳಿದಿದೆ. ಈ ಹಿನ್ನೆಲೆ ಹೆಚ್ಚುವರಿ ಆಮ್ಲಜನಕವನ್ನು ಇತರ ರಾಜ್ಯಗಳಿಗೆ ನೀಡಿ ಎಂದು ನಾವು ಕೇಂದ್ರಕ್ಕೆ ಪತ್ರ ಬರೆದಿದ್ದೇವೆ'' ಎಂದು ತಿಳಿಸಿರುವ ಅವರು, ''ನಮ್ಮದು ಜವಾಬ್ದಾರಿಯುತ ಸರ್ಕಾರ'' ಎಂದು ಹೇಳಿದ್ದಾರೆ.
ಕೊರೊನಾ ಪ್ರಕರಣಗಳು ತೀವ್ರ ಅಧಿಕವಾಗುತ್ತಿದ್ದ ಸಂದರ್ಭ ದೆಹಲಿಗೆ ಸಹಾಯ ಮಾಡಿದ ಕೇಂದ್ರ ಸರ್ಕಾರ ಮತ್ತು ದೆಹಲಿ ಹೈಕೋರ್ಟ್ಗೆ ಇದೇ ವೇಳೆ ಸಿಸೋಡಿಯಾ ಧನ್ಯವಾದ ತಿಳಿಸಿದ್ದಾರೆ.