ಕೊಚ್ಚಿ, ಮೇ 13 (DaijiworldNews/MS): ದಕ್ಷ ಕೋವಿಡ್ -19 ನಿರ್ವಹಣೆಯ ಖ್ಯಾತಿಯಿರುವ ಕೇರಳ ಸರ್ಕಾರವು ರೆಮಿಡಿಸಿವಿರ್'ನ 1 ಲಕ್ಷ ಬಳಕೆಯಾಗದ ಬಾಟಲುಗಳನ್ನು ಕೇಂದ್ರಕ್ಕೆ ಹಿಂದಿರುಗಿಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಈಗಾಗಲೇ ಸೋಂಕಿನ ಪರಿಣಾಮಕಾರಿ ನಿರ್ವಹಣೆ ಹೆಗ್ಗಳಿಕೆ ಹೊತ್ತಿರುವ ಕೇರಳ ಈಗ ಮತ್ತೊಂದು ಸಾಧನೆ ಮಾಡಿದೆ. ಲಸಿಕೆಯ ಒಂದು ಹನಿಯನ್ನೂ ವ್ಯರ್ಥಮಾಡದೆ ಹೆಚ್ಚುವರಿಯಾಗಿ ಲಸಿಕೆ ನೀಡಿದ್ದ ಕೇರಳ ರೆಮಿಡಿಸಿವಿರ್ನ ಇಂಜೆಕ್ಷನ್ ನ ಒಂದು ಲಕ್ಷ ಬಾಟಲಿಗಳನ್ನು ಕೇಂದ್ರ ಸರ್ಕಾರಕ್ಕೆ ವಾಪಾಸ್ ಕಳುಹಿಸಿದೆ. ಮಾತ್ರವಲ್ಲದೆ ಅಗತ್ಯವಿರುವ ರಾಜ್ಯಗಳಿಗೆ ಹಂಚಿಕೆ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಿದೆ.
ದೇಶದ ಉಳಿದ ರಾಜ್ಯವೂ ರೆಮಿಡಿಸಿವಿರ್ನ ಔಷಧದ ತೀವ್ರ ಕೊರತೆಯ ವಿರುದ್ಧ ಹೋರಾಡುತ್ತಿರುವ ಸಮಯದಲ್ಲಿ ಕೇಂದ್ರ ಸರ್ಕಾರ ಕಳೆದ ವಾರ ಮೇ 16 ರವರೆಗೆ ರಾಜ್ಯಗಳಿಗೆ ರೆಮಿಡಿಸಿವಿರ್ ಅನ್ನು ಹಂಚಿಕೆ ಮಾಡಿತ್ತು.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಅವರು ಈ ನಿರ್ಧಾರ ಕೈಗೊಂಡಿದ್ದು, ಹಂಚಿಕೆ ಯೋಜನೆಯನ್ನು ಕೇಂದ್ರ ಔಷಧೀಯ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಜಂಟಿಯಾಗಿ ಮಾಡಿತ್ತು.
ಪ್ರತಿ ರಾಜ್ಯದಲ್ಲಿ ರೆಮಿಡಿಸಿವಿರ್ನ ಅವಶ್ಯಕತೆಯನ್ನು ಪರಿಗಣಿಸಿ ಮತ್ತು ಅದರ ಸಮರ್ಪಕ ಲಭ್ಯತೆಯನ್ನು ದೊರೆಯುವಂತೆ ಮಾಡಲು ಮೇ 16 ರವರೆಗೆ ರೆಮಿಡಿಸಿವಿರ್ ಹಂಚಿಕೆಯನ್ನು ಮಾಡಲಾಗಿತ್ತು. ಆದರೆ ಅಗತ್ಯವಿರುವಷ್ಟು ಬಳಸಿ 1 ಲಕ್ಷ ರೆಮಿಡಿಸಿವಿರ್ ನ ಬಾಟಲ್ ಗಳನ್ನು ಕೇಂದ್ರಕ್ಕೆ ವಾಪಾಸ್ ಕಳುಹಿಸಿದೆ.