ಬೆಂಗಳೂರು, ಮೇ 13 (DaijiworldNews/MB) : ರಾಜ್ಯದಲ್ಲಿ ಕೊರೊನಾ ಸೋಂಕು ಗ್ರಾಮದಲ್ಲಿಯೂ ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಆತಂಕ ವ್ಯಕ್ತಿಪಡಿಸಿದ್ದಾರೆ. ''ರಾಜ್ಯ ಬಿಜೆಪಿ ಸರ್ಕಾರ ಬೆಂಗಳೂರು ನಗರಕ್ಕಷ್ಟೇ ಸೀಮಿತವಾಗದೆ ಜಿಲ್ಲೆ, ತಾಲೂಕು, ಗ್ರಾಮಗಳ ಕಡೆ ಗಮನಹರಿಸಬೇಕಾಗಿದೆ'' ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ''ಕೊರೊನಾ ಸೋಂಕು ತ್ವರಿತ ಗತಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಹರಡುತ್ತಿರುವುದು ಆಘಾತಕಾರಿ ಬೆಳವಣಿಗೆ. ರಾಜ್ಯದಲ್ಲಿ ಈಗಿನ ಶೇಕಡಾ 55ರಷ್ಟು ಸೋಂಕಿನ ಪ್ರಕರಣಗಳು ಗ್ರಾಮೀಣ ಪ್ರದೇಶದಿಂದ ವರದಿಯಾಗುತ್ತಿರುವುದನ್ನು ತಜ್ಞರು ಗುರುತಿಸಿದ್ದಾರೆ. ತಿಂಗಳ ಹಿಂದೆ ಈ ಪ್ರಮಾಣ ಶೇಕಡಾ 30 ರಷ್ಟಿತ್ತು'' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
''ರಾಜ್ಯ ಬಿಜೆಪಿ ಸರ್ಕಾರ ಬೆಂಗಳೂರು ನಗರಕ್ಕಷ್ಟೇ ಸೀಮಿತವಾಗದೆ ಜಿಲ್ಲೆ, ತಾಲೂಕು, ಗ್ರಾಮಗಳ ಕಡೆ ಗಮನಹರಿಸಬೇಕಾಗಿದೆ. ಈಗಲೂ ಕಾಲ ಮಿಂಚಿಲ್ಲ, ರಾಜ್ಯ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಲ್ಲಿ ಹಾಸಿಗೆ, ಆಮ್ಲಜನಕ, ಐಸಿಯು, ವೆಂಟಿಲೇಟರ್ ಮತ್ತು ವೈದ್ಯಕೀಯ ಸಿಬ್ಬಂದಿಯ ವ್ಯವಸ್ಥೆಯನ್ನು ಬಲಪಡಿಸಬೇಕು'' ಎಂದು ಆಗ್ರಹಿಸಿದ್ದಾರೆ.
''ಜಿಲ್ಲೆಗಳಲ್ಲಿ ಕೊರೊನಾ ಚಿಕಿತ್ಸೆ ಮತ್ತು ನಿಯಂತ್ರಣ ವ್ಯವಸ್ಥೆಯ ಹೊಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ವಹಿಸಿಕೊಡಬೇಕು. ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿಯೇ ಮೊಕ್ಕಾಂ ಹೂಡಿ ಮೇಲ್ವಿಚಾರಣೆ ನಡೆಸುವಂತೆ ರಾಜ್ಯ ಬಿಜೆಪಿ ಸರ್ಕಾರ ಅವರಿಗೆ ತಾಕೀತು ಮಾಡಬೇಕು'' ಎಂದು ಹೇಳಿದ್ದಾರೆ.
''ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಜಿಲ್ಲಾ ಮಟ್ಟದಲ್ಲಿ ಅನುಸರಿಸಲಾಗಿದ್ದ ಸುರಕ್ಷತಾ ಕ್ರಮಗಳನ್ನು ಎರಡನೇ ಅಲೆ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಮತ್ತು ಜಿಲ್ಲಾಡಳಿತ ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಕೂಡಾ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸೋಂಕು ಉಲ್ಭಣಗೊಳ್ಳಲು ಕಾರಣ'' ಎಂದು ಅಭಿಪ್ರಾಯಿಸಿದ್ದಾರೆ.
''ಕಳೆದೆರಡು ತಿಂಗಳ ಅವಧಿಯಲ್ಲಿ ಹೆಚ್ಚು ಸೋಂಕಿನ ಪ್ರಕರಣಗಳಿದ್ದ ಮಹಾರಾಷ್ಟ್ರ ಸೇರಿದಂತೆ ಬೇರೆ ರಾಜ್ಯಗಳಿಂದ ಜನ ಯಾವುದೇ ತಪಾಸಣೆಯಿಲ್ಲದೆ ಇಲ್ಲಿಗೆ ಬಂದಿದ್ದಾರೆ. ಬೆಂಗಳೂರಿನ ಸ್ಥಿತಿ ಬಿಗಡಾಯಿಸಿದ ನಂತರ ಅಲ್ಲಿಂದಲೂ ಜನ ಹಿಂಡುಗಟ್ಟಿಕೊಂಡು ಜಿಲ್ಲೆಗಳಿಗೆ ತೆರಳಿದ್ದಾರೆ. ಅಂತರರಾಜ್ಯ ಮಾತ್ರವಲ್ಲ ಅಂತರಜಿಲ್ಲಾ ಸಂಚಾರವನ್ನು ನಿರ್ಬಂಧಿಸಬೇಕು'' ಎಂದು ಆಗ್ರಹಿಸಿದ್ದಾರೆ.
''ಬೆಂಗಳೂರು ನಗರಕ್ಕೆ ಹೋಲಿಸಿದರೆ ಜಿಲ್ಲೆಗಳಲ್ಲಿ ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆಯ ತೀವ್ರ ಕೊರತೆಯಿರುವುದು ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿಯೇ ಜಗಜ್ಜಾಹೀರಾಗಿದೆ. 25 ಅಮಾಯಕರನ್ನು ಬಲಿ ತೆಗೆದುಕೊಂಡ ಚಾಮರಾಜನಗರ ಜಿಲ್ಲೆಯ ದುರಂತ ಘಟನೆಯ ನಂತರವೂ ರಾಜ್ಯ ಬಿಜೆಪಿ ಸರ್ಕಾರ ಎಚ್ಚೆತ್ತುಕೊಂಡಿಲ್ಲ'' ಎಂದು ದೂರಿದ್ದಾರೆ.