ನವದೆಹಲಿ, ಮೇ 13 (DaijiworldNews/MB) : ಲಸಿಕೆಗಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಾಜ್ಯಗಳು ಪರಸ್ಪರ ಕಿತ್ತಾಟಡುವಂತೆ ಮಾಡಿರುವುದು ದೇಶಕ್ಕೆ ಕೆಟ್ಟ ಹೆಸರು ತರುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಭಾರತದ ರಾಜ್ಯಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಸ್ಪರ ಸ್ಪರ್ಧಿಸುವಂತಾಗಿದೆ. ಯುಪಿ ವಿರುದ್ಧ ಮಹಾರಾಷ್ಟ್ರ, ಮಹಾರಾಷ್ಟ್ರ ವಿರುದ್ದ ಒರಿಸ್ಸಾ, ಒರಿಸ್ಸಾ ದೆಹಲಿಯ ವಿರುದ್ಧ ಹೋರಾಡುತ್ತಿದೆ'' ಎಂದು ಹೇಳಿದ್ದಾರೆ.
''ಭಾರತ ಎಲ್ಲಿದೆ?'' ಎಂದು ಪ್ರಶ್ನಿಸಿರುವ ಅವರು, ''ಈ ಎಲ್ಲ ಬೆಳವಣಿಗೆಗಳು ಭಾರತದ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ಚಿತ್ರಿಸುತ್ತಿದೆ. ಭಾರತವು ಒಂದು ದೇಶವಾಗಿ, ಎಲ್ಲಾ ಭಾರತದ ರಾಜ್ಯಗಳ ಪರವಾಗಿ ಲಸಿಕೆಗಳನ್ನು ಖರೀದಿಸಬೇಕು'' ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಮತ್ತೊಂದು ಟ್ವೀಟ್ ಮಾಡಿರುವ ಅವರು, ''ರಾಜ್ಯಗಳು ಲಸಿಕೆ ಉತ್ಪಾದನಾ ರಾಷ್ಟ್ರಗಳನ್ನು ಪ್ರತ್ಯೇಕವಾಗಿ ಸಂಪರ್ಕಿಸುವ ಬದಲು ಭಾರತ ಸರ್ಕಾರವು ನೇರವಾಗಿ ಸಂಪರ್ಕಿಸಿದರೆ ನಮ್ಮ ಚೌಕಾಶಿ ಶಕ್ತಿ ಅಧಿಕವಾಗುತ್ತದೆ. ಬೇರೆ ದೇಶಗಳೊಂದಿಗೆ ಮಾತುಕತೆ ನಡೆಸಲು ಭಾರತ ಸರ್ಕಾರವು ಹೆಚ್ಚು ರಾಜತಾಂತ್ರಿಕ ಶಕ್ತಿ ಹೊಂದಿದೆ'' ಎಂದು ಕೂಡಾ ಹೇಳಿದ್ದಾರೆ.