ನವದೆಹಲಿ, ಮೇ 13 (DaijiworldNews/MS): ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಸೆಂಟ್ರಲ್ ವಿಸ್ಟಾ ಮರು ಅಭಿವೃದ್ಧಿ ಯೋಜನೆಗೆ ಕೇಳಿಬರುತ್ತಿರುವ ತೀವ್ರ ಟೀಕೆಗಳ ನಡುವೆ ಕೇಂದ್ರ ಲೋಕೋಪಯೋಗಿ ಇಲಾಖೆ ದೆಹಲಿಯ ಇಂಡಿಯಾ ಗೇಟ್ ಬಳಿ ನಿರ್ಮಾಣ ಸ್ಥಳದಲ್ಲಿ ಫೋಟೋ ಮತ್ತು ವಿಡಿಯೊ ರೆಕಾರ್ಡಿಂಗ್ ನ್ನು ನಿಷೇಧಿಸಿದೆ.
ಇದಕ್ಕಾಗಿ ಸೆಂಟ್ರಲ್ ವಿಸ್ಟಾ ಪ್ರದೇಶದಲ್ಲಿ ಸೂಚನಾ ಫಲಕಗಳನ್ನು ಹಾಕಲಾಗಿದ್ದು ಇದರಲ್ಲಿ ವಿಡಿಯೊ ರೆಕಾರ್ಡಿಂಗ್, ಫೋಟೋಗ್ರಫಿ ನಿಷೇಧಿಸಲಾಗಿದೆ ಎಂದು ಬರೆಯಲಾಗಿದೆ.
ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ಮಾದ್ಯಮಗಳು ಸಿಪಿಡಬ್ಲ್ಯುಡಿಯ ಅಧಿಕಾರಿಯೊಬ್ಬರು ಸಂಪರ್ಕಿಸಿದಾಗ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ದೇಶದಲ್ಲಿ ಕೊರೋನಾ ಉಲ್ಬಣವಾಗಿ ಸಂಕಷ್ಟ ಸ್ಥಿತಿಗೆ ತಲುಪಿರುವಾಗ ಸೆಂಟ್ರಲ್ ವಿಸ್ಟಾ ಕಾಮಗಾರಿ ಬೇಕೇ ಎಂದು ವಿರೋಧ ಪಕ್ಷಗಳಿಂದ ಕೇಂದ್ರ ಸರ್ಕಾರ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ದೇಶದ ಶಕ್ತಿ ಕೇಂದ್ರ ಕಾರಿಡಾರ್ ನಲ್ಲಿ ಸೆಂಟ್ರಲ್ ವಿಸ್ಟಾದಲ್ಲಿ ಹೊಸ ಸಂಸತ್ತು ಕಟ್ಟಡ, ಕೇಂದ್ರ ಸಚಿವಾಲಯ, 3 ಕಿಲೋ ಮೀಟರ್ ವರೆಗೆ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ವರೆಗೆ ಮರು ನವೀಕರಣ, ಹೊಸ ಪ್ರಧಾನಿ ನಿವಾಸ ಮತ್ತು ಕಚೇರಿ, ಹೊಸ ಉಪ ರಾಷ್ಟ್ರಪತಿ ಎನ್ ಕ್ಲೇವ್ ನ್ನು ಒಳಗೊಂಡಿದೆ.