ಚಾಮರಾಜನಗರ: ಮೇ.13 (DaijiworldNews/HR): ಚಾಮರಾಜನಗರ ಜಿಲ್ಲಾ ಕೊರೊನಾ ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆಯಲ್ಲಿ ವಿಳಂಬ ಆಗಿದ್ದರಿಂದ 24 ಸೋಂಕಿತರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಮೇ 2ರ ಸಂಜೆ ವೇಳೆಗೆ ಚಾಮರಾಜನಗರ ಜಿಲ್ಲಾ ಕೊರೊನಾ ಆಸ್ಪತ್ರೆಗೆ 100 ಆಕ್ಸಿಜನ್ ಸಿಲಿಂಡರ್ ಬೇಕಿತ್ತು. ಸಕಾಲದಲ್ಲಿ ಸಿಲಿಂಡರ್ ಪೂರೈಕೆಯಾಗಲಿಲ್ಲ ಎನ್ನುವ ಮೂಲಕ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ರೋಹಿಣಿ ಸಿಂಧೂರಿಯತ್ತ ಬೆರಳು ತೋರಿಸಿದ್ದರು. ಆದರೆ ಇದೀಗ ಆಕ್ಸಿಜನ್ ದುರಂತಕ್ಕೆ ರೋಹಿಣಿ ಸಿಂಧೂರಿ ಕಾರಣವಲ್ಲ ಎಂಬುದು ಬಯಲಾಗಿದೆ.
ದುರಂತ ಪ್ರಕರಣಕ್ಕೆ ಕಾರಣವಾದ ಆಕ್ಸಿಜನ್ ಕೊರತೆ ಕುರಿತು ಹೈಕೋರ್ಟ್ ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ತನಿಖಾ ಆಯೋಗದ ವರದಿಯಲ್ಲಿ ಮೈಸೂರು ಜಿಲ್ಲಾಧಿಕಾರಿ ಆಕ್ಸಿಜನ್ ಪೂರೈಕೆ ತಡೆ ಹಿಡಿದ ಬಗ್ಗೆ ದಾಖಲೆಗಳಿಲ್ಲ ಎಂದು ತಿಳಿಸಿದೆ.
ಇನ್ನು ಚಾಮರಾಜನಗರ ದುರಂತಕ್ಕೆ ಚಾಮರಾಜನಗರ ಜಿಲ್ಲಾಧಿಕಾರಿ ರವಿ ಅವರ ಕ್ರಿಯಾಶೀಲತೆಯ ಕೊರತೆಯೇ ಕಾರಣ ಎಂದು ಹೈಕೋರ್ಟ್ ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ.
ಈ ಪ್ರಕರಣಕ್ಕೆ ಆಕ್ಸಿಜನ್ ಕೊರತೆಯೇ ಕಾರಣ. ಮೇ 2ರ ರಾತ್ರಿ 11 ಗಂಟೆಯಿಂದ ಮೇ 3ರ ಮಧ್ಯರಾತ್ರಿವರೆಗೆ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಲಭ್ಯವಿರಲಿಲ್ಲ. ಸಂದರ್ಭಕ್ಕೆ ತಕ್ಕಂತೆ ನಾಯಕತ್ವ ಮತ್ತು ಕ್ರಿಯಾಶೀಲತೆ ತೋರಿಸುವಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ವಿಫಲರಾಗಿದ್ದು, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಆಕ್ಸಿಜನ್ ಸಾಗಿಸಲು ಯಾವುದೇ ತಡೆವೊಡಿಲ್ಲ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲ್ ಗೌಡ ನೇತೃತ್ವದ ಕಾನೂನು ಸೇವೆಗಳ ಪ್ರಾಧಿಕಾರದ ಸಮಿತಿ ಹೇಳಿದ್ದು, ರೋಹಿಣಿ ಸಿಂಧೂರಿಗೆ ಕ್ಲೀನ್ಚಿಟ್ ನೀಡಿದೆ.
ಇತ್ತ ರೋಹಿಣಿ ಸಿಂಧೂರಿಗೆ ಕ್ಲೀನ್ ಚಿಟ್ ಸಿಗುತ್ತಿದ್ದಂತೆ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ರವಿ ಮೌನಕ್ಕೆ ಶರಣಾಗಿದ್ದಾರೆ. ಇಂದು ಬೆಳಗ್ಗೆಯಿಂದ ಅವರ ಮೊಬೈಲ್ ನಾಟ್ ರೀಚಬಲ್ ಆಗಿದೆ ಎಂದು ತಿಳಿದು ಬಂದಿದೆ.