ನವದೆಹಲಿ, ಮೇ.13 (DaijiworldNews/HR): ದೇಶದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ನಿಯಂತ್ರಣಕ್ಕೆ ಬರಬೇಕಾದರೆ ಶೇ.10ಕ್ಕಿಂತ ಅಧಿಕ ಕೊರೊನಾ ಸೋಂಕು ಇರುವ ನಗರಗಳಲ್ಲಿ 6 ರಿಂದ 8 ವಾರಗಳ ಕಾಲ ಕಡ್ಡಾಯ ಲಾಕ್ಡೌನ್ ಮಾಡಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಮುಖ್ಯಸ್ಥ ಡಾ. ಬಲರಾಂ ಭಾರ್ಗವ ಹೇಳಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, "ಭಾರತದಲ್ಲಿ ಎರಡನೇ ಅಲೆಯ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದ್ದು, ಈಗಾಗಲೇ ಸಾಕಷ್ಟು ರಾಜ್ಯಗಳು ಸೋಂಕು ನಿಯಂತ್ರಣಕ್ಕೆ ಲಾಕ್ಡೌನ್ ಮಾಡುತ್ತಿದ್ದು, ಒಟ್ಟಾರೆ ಕೊರೊನಾ ಪರೀಕ್ಷೆಗಳ ಪೈಕಿ ಶೇ.10ಕ್ಕಿಂತ ಹೆಚ್ಚು ಪಾಸಿಟಿವ್ ಹೊಂದಿರುವ ಎಲ್ಲಾ ಜಿಲ್ಲೆಗಳಲ್ಲಿ ಲಾಕ್ಡೌನ್ ನಿರ್ಬಂಧಗಳು ಜಾರಿಯಲ್ಲಿರಬೇಕು" ಎಂದರು.
ಇನ್ನು "ಶೇ.10ಕ್ಕಿಂತ ಅಧಿಕ ಕೊರೊನಾ ಸೋಂಕು ಸಕಾರಾತ್ಮಕ ದರ ಹೊಂದಿರುವ ಜಿಲ್ಲೆಗಳು ಕಡ್ಡಾಯವಾಗಿ ಲಾಕ್ಡೌನ್ ನಿರ್ಬಂಧಗಳಡಿಯಲ್ಲಿ ಬರಬೇಕು, ಸಕಾರಾತ್ಮಕ ದರವ ಶೇ.10 ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಲಾಕ್ಡೌನ್ ನಿರ್ಬಂಧಗಳನ್ನು ತೆಗೆಯಬಹುದು" ಎಂದು ತಿಳಿಸಿದ್ದಾರೆ.