ನವದೆಹಲಿ, ಮೇ 13 (DaijiworldNews/MB) : ಕೇಂದ್ರ ಸರ್ಕಾರವು ಕೊರೊನಾ ಸಂಬಂಧಿತ ಜನರ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಿಲ್ಲ. ಕೊರೊನಾ ನಿರ್ವಹಣೆಯ ಹೊಣೆಗಾರಿಕೆ ಇರುವವರು ಎಲ್ಲೋ ಅಡಗಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಕೊರೊನಾವೈರಸ್ ದುಃಖದ ವಾರ್ತೆ ಪದೇ ಪದೇ ಬರುತ್ತಿದೆ. ಮೂಲ ಸಮಸ್ಯೆಗಳನ್ನು ಇನ್ನೂ ಬಗೆಹರಿಸಲಾಗಿಲ್ಲ. ಈ ಸಾಂಕ್ರಾಮಿಕ ರೋಗದ ಸಂದರ್ಭ ಕೇಂದ್ರ ಸರ್ಕಾರದ ಕ್ರೌರ್ಯವನ್ನು ನಮ್ಮ ದೇಶವಾಸಿಗಳು ಎಷ್ಟು ದಿನ ಸಹಿಸಿಕೊಳ್ಳುತ್ತಾರೆ?'' ಎಂದು ಪ್ರಶ್ನಿಸಿದ್ದಾರೆ.
''ಕೊರೊನಾ ನಿರ್ವಹಣೆಯ ಹೊಣೆಗಾರಿಕೆ ಇರುವವರು ಎಲ್ಲೋ ಅಡಗಿಕೊಂಡಿದ್ದಾರೆ'' ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯ ಕಾಲೆಳೆದಿದ್ದಾರೆ.
ಇನ್ನು ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋನಿಯಾ ಗಾಂಧಿ, ಶರದ್ ಪವಾರ್, ಉದ್ದವ್ ಠಾಕ್ರೆ, ಮಮತಾ ಬ್ಯಾನರ್ಜಿ, ಎಂ.ಕೆ. ಸ್ಟಾಲಿನ್, ಹೇಮಂತ್ ಸೊರೆನ್ ಮತ್ತು ಅಖಿಲೇಶ್ ಯಾದವ್ ಸೇರಿದಂತೆ ವಿರೋಧ ಪಕ್ಷದ 12 ನಾಯಕರು ಜಂಟಿ ಪತ್ರವನ್ನು ಬರೆದಿದ್ದಾರೆ. ಈ ಪತ್ರದಲ್ಲಿ ದೇಶದಾದ್ಯಂತ ಉಚಿತ ಕೊರೊನಾ ಲಸಿಕೆ ಅಭಿಯಾನ ಆರಂಭಕ್ಕೆ, ಸೆಂಟ್ರಲ್ ವಿಸ್ತಾ ಯೋಜನೆಯ ನಿರ್ಮಾಣವನ್ನು ಸ್ಥಗಿತಗೊಳಿಸಲು ಹಾಗೂ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ಮನವಿ ಮಾಡಿದ್ದಾರೆ.