ಬೆಂಗಳೂರು, ಮೇ.12 (DaijiworldNews/PY): ಪೊಲೀಸರು ಹಲ್ಲೆ ಮಾಡಿದ್ದಾರೆ ಎನ್ನುವ ವಿಡಿಯೋವನ್ನು ಸುಖಾಸುಮ್ಮನೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಬೆಂಗಳೂರು ಕೈ ಕಾರ್ಯಕರ್ತೆ ಪದ್ಮಾ ಹರೀಶ್ ಅವರನ್ನು ಬೆಂಗಳೂರು ಸೈಬರ್ ಪೊಲೀಸರು ಬಂಧಿಸಿದ್ದಾರೆ.
ಲಾಕ್ಡೌನ್ ಮೊದಲ ದಿನ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ವಿಡಿಯೋದಲ್ಲಿ, ಪೊಲೀಸರೆಲ್ಲಾ ಸುತ್ತುವರೆದು ವ್ಯಕ್ತಿಯೋರ್ವನಿಗೆ ಹೊಡೆಯುತ್ತಿದ್ದರು. ವಿಡಿಯೋ ಕರ್ನಾಟಕ್ಕೆ ಸಂಬಂಧಿಸಿದ್ದು, ರಾಜ್ಯದ ಪೊಲೀಸರು ದರ್ಪ ತೋರಿಸಿದ್ದಾರೆ ಎಂದು ಮಹಿಳೆಯೊಬ್ಬರು ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೋವನ್ನು ಪೊಲೀಸರು ಸೂಕ್ಷ್ಮವಾಗಿ ಗಮನಿಸಿದ್ದು, ಇದು ರಾಜ್ಯದಲ್ಲಿ ನಡೆದ ಘಟನೆ ಅಲ್ಲ. ಇದು ಎಪ್ರಿಲ್ 3ರಂದು ಮುಂಬೈಯಲ್ಲಿ ನಡೆದಿರುವ ಘಟನೆ ಎನ್ನುವುದನ್ನು ಪತ್ತೆ ಮಾಡಿದ್ದಾರೆ.
ಈ ಸುಳ್ಳು ಸುದ್ದಿ ಶೇರ್ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ಪಂತ್ ಅವರು ಟ್ವೀಟ್ ಮೂಲಕ ಸೂಚಿಸಿದ್ದರು. ಈ ಬಗ್ಗೆ ಸತ್ಯ ಏನೆಂದು ತಿಳಿಯದೇ ಪ್ರಚೋದನಾತ್ಮಕ ಸಂದೇಶಗಳನ್ನು ಪೋಸ್ಟ್ ಮಾಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ಪೋಸ್ಟ್ ಹಾಕಿದ್ದ ಮಹಿಳೆಯ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ಬಂದ ಕೂಡಲೇ ದಕ್ಷಿಣ ವಿಭಾಗದ ಸಿಇಎನ್ ಠಾಣೆ ಪೊಲೀಸರು ವಿಡಿಯೋ ಪೋಸ್ಟ್ ಮಾಡಿದ್ದ ಪದ್ಮಾ ಹರೀಶ್ ಅವರನ್ನು ಪತ್ತೆ ಮಾಡಿದ್ದಾರೆ. ಬಳಿಕ ನೋಟಿಸ್ ನೀಡಿ ಅವರನ್ನು ವಿಚಾರಣೆಗೆ ಕರೆಸಲಾಗಿತ್ತು, ಈ ವೇಳೆ ಹಳೇ ವಿಡಿಯೋಗೆ ಧ್ವನಿ ನೀಡಿ ವಿಡಿಯೋ ಪೋಸ್ಟ್ ಮಾಡಿದ್ದ ಸಂಗತಿ ತನಿಖೆಯ ಸಂದರ್ಭ ತಿಳಿದುಬಂದಿದೆ.
ತನಿಖೆಯ ಸಂದರ್ಭ ಆರೋಪಿ ಪದ್ಮಾ ಹರೀಶ್ ಅವರು ತಪ್ಪೊಪ್ಪಿಕೊಂಡಿದ್ದು, ಈ ಹಿನ್ನೆಲೆ ಅವರನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳುಸುದ್ದಿ ಹರಿಬಿಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಸ್ಪಷ್ಟವಾದ ಸಂದೇಶ ರವಾನಿಸಿದ್ದಾರೆ.