ನವದೆಹಲಿ, ಮೇ 12 (DaijiworldNews/MB) : ''ಕೋವಾಕ್ಸಿಸ್ ಲಸಿಕೆ ತಯಾರಕ ಸಂಸ್ಥೆ ಭಾರತ್ ಬಯೋಟೆಕ್ ದೆಹಲಿಗೆ ಹೆಚ್ಚುವರಿ ಕೋವಾಕ್ಸಿನ್ ಲಸಿಕೆ ನೀಡಲಾಗದು ಎಂದು ಹೇಳಿದೆ. ಕೇಂದ್ರ ಸರ್ಕಾರವೇ ಲಸಿಕೆ ಪೂರೈಕೆಯನ್ನು ನಿಯಂತ್ರಣ ಮಾಡುತ್ತಿದೆ'' ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬುಧವಾರ ಹೇಳಿದ್ದಾರೆ.
''ರಾಷ್ಟ್ರರಾಜಧಾನಿಯಾದ ದೆಹಲಿಯಲ್ಲಿ ಕೋವಾಕ್ಸಿನ್ ದಾಸ್ತಾನು ಮುಗಿದಿದೆ. ಆದರೆ ಕೋವಾಕ್ಸಿನ್ ತಯಾರಕರು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಯ ಸೂಚನೆಯ ಲಸಿಕೆ ಲಭ್ಯವಿಲ್ಲದ ಕಾರಣ ದೆಹಲಿ ಸರ್ಕಾರಕ್ಕೆ ಲಸಿಕೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಲಸಿಕೆ ಲಭಿಸದೆ 17 ಶಾಲೆಗಳಲ್ಲಿ ಸ್ಥಾಪಿಸಲಾದ ಸುಮಾರು 100 ವ್ಯಾಕ್ಸಿನೇಷನ್ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ಮೋದಿ ಸರ್ಕಾರವು ಲಸಿಕೆ ಪೂರೈಕೆಯ ನಿಯಂತ್ರಣ ಮಾಡುತ್ತಿದೆ ಎಂಬುದು ಸ್ಪಷ್ಟ'' ಎಂದು ಸಿಸೋಡಿಯಾ ಆರೋಪಿಸಿದ್ದಾರೆ.
''ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಲಸಿಕೆಗಳನ್ನು ಕೂಡಾ ಭಾರತದಲ್ಲಿ ಬಳಕೆಗೆ ಅನುಮೋದನೆ ನೀಡಬೇಕು. ಹಾಗೆಯೇ ಮೂರು ತಿಂಗಳೊಳಗೆ ಎಲ್ಲರಿಗೂ ಲಸಿಕೆ ನೀಡುವಂತೆ ರಾಜ್ಯಗಳಿಗೆ ಸೂಚಿಸಬೇಕು'' ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿರುವ ಸಿಸೋಡಿಯಾ ಅವರು, ''ಕೇಂದ್ರ ಸರ್ಕಾರ ಲಸಿಕೆಗಳನ್ನು ರಫ್ತು ಮಾಡುವುದನ್ನು ನಿಲ್ಲಿಸಿ, ಈ ಎರಡು ಲಸಿಕೆಗಳ ತಯಾರಿಕ ಸೂತ್ರವನ್ನು ಸಾಮೂಹಿಕ ಉತ್ಪಾದನೆಗಾಗಿ ಇತರ ಕಂಪನಿಗಳಿಗೂ ಹಂಚಿಕೊಳ್ಳಬೇಕು'' ಎಂದು ಆಗ್ರಹಿಸಿದ್ದಾರೆ.