ಬೆಂಗಳೂರು, ಮೇ.12 (DaijiworldNews/PY): "ಲಸಿಕೆಗೆ ಏಕಾಏಕಿ ಬೇಡಿಕೆ ಹೆಚ್ಚಾದ ಕಾರಣ ರಾಜ್ಯದಲ್ಲಿ ಲಸಿಕೆ ಕೊರತೆಯಾಗಿದೆ" ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಲಸಿಕೆ ಕೊರತೆಯಾಗಿರುವ ಕಾರಣ ನಾವು ಲಸಿಕೆ ತರಿಸಿಕೊಳ್ಳಲು ಕ್ರಮವಹಿಸಿದ್ದೇವೆ. ಲಸಿಕೆ ಸಿಗುತ್ತಿಲ್ಲ ಎಂದು ಜನರು ಲಸಿಕಾ ಕೇಂದ್ರಗಳಿಗೆ ಬಂದಿದ್ದಾರೆ. ಈ ಬಗ್ಗೆ ಜನರು ಆತಂಕಕ್ಕೊಳಗಾಗುವುದು ಬೇಡ" ಎಂದು ತಿಳಿಸಿದ್ದಾರೆ.
"ಬೆಂಗಳೂರಿನಲ್ಲಿ ನೊಡೆಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಸೋಂಕಿನಿಂದ ಸಾವನ್ನಪ್ಪಿದವರ ಬಗ್ಗೆ ಮಾಹಿತಿ ನೀಡದ ಮೂರು ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿದೆ. ಬೆಡ್ ಖಾಲಿಯಾದ ತಕ್ಷಣವೇ ಮಾಹಿತಿ ನೀಡುವಂತ ವ್ಯವಸ್ಥೆ ಜಾರಿ ಮಾಡಲಾಗಿದೆ. ಮುಂದಿನ ಎರಡು ದಿನಗಳಲ್ಲಿ 2,000 ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ನಿರ್ಮಿಸಲಾಗುವುದು. ಈಗಾಗಲೇ 1,200 ಸ್ಟೆಪ್ಡೌನ್ ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಸರ್ಕಾರ ಕಾನ್ಸಂಟ್ರೇಟರ್ಗಳನ್ನು ನೀಡಿ ರೋಗಿಗಳ ಪ್ರಾಣ ರಕ್ಷಣೆ ನೆರವು ನೀಡಲು ಮುಂದಾಗುತ್ತದೆ" ಎಂದು ಹೇಳಿದ್ದಾರೆ.
"ಲಾಕ್ಡೌನ್ ಸಂದರ್ಭ ಲಾಠಿ ಬೀಸಲು ಅವಕಾಶ ಕೊಡದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಲಾಠಿ ಬೀಸುವುದು, ವೆಹಿಕಲ್ ಸೀಜ್ ಮಾಡುವುದು, ಪ್ರಕರಣ ದಾಖಲಿಸುವುದು ಮುಖ್ಯವಲ್ಲ. ಕೊರೊನಾ ಸೋಂಕಿನಿಂದ ಜನರು ಸಾಯುತ್ತಿದ್ದಾರೆ. ಜನರು ಈ ಬಗ್ಗೆ ಅರ್ಥ ಮಾಡಿಕೊಂಡು ಸಹಕರಿಸಬೇಕು. ಜನರ ಸುರಕ್ಷತೆಗಾಗಿ ಲಾಕ್ಡೌನ್ ಮಾಡಲಾಗಿದೆ. ಮನೆಯಿಂದ ಹೊರಗೆ ಬರಬೇಡಿ ಸರ್ಕಾರದೊಂದಿಗೆ ಕೈಜೋಡಿಸಿ" ಎಂದು ಮನವಿ ಮಾಡಿದ್ದಾರೆ.
"ರಾಜ್ಯದಲ್ಲಿ ಕೊರೊನಾ ಟೆಸ್ಟ್ಗಳನ್ನು ಕಡಿಮೆ ಮಾಡಿಲ್ಲ. ಪ್ರೊಸೀಜರ್ ಪ್ರಕಾರ ಟೆಸ್ಟ್ ಮಾಡಲಾಗುತ್ತಿದೆ. ಕಿಟ್ಗಳು ಲಭ್ಯವಿದೆ. ಇಲ್ಲಿಯವರೆಗೆ 30 ಬೆಡ್ಗಳ ಖಾಸಗಿ ಆಸ್ಪತ್ರೆಗಳನ್ನು ಪರಿಗಣಿಸಿರಲಿಲ್ಲ. ಆ ಆಸ್ಪತ್ರೆಗಳ ಮೂಲಕ ಸುಮಾರು ಎರಡು ಸಾವಿರ ಬೆಡ್ಗಳನ್ನು ಪಡೆಯಲು ಅವಕಾಶವಿದೆ. ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ಬೆಡ್ ಕೊರತೆ ಇಲ್ಲದಂತೆ ನೋಡಿಕೊಳ್ಳುತ್ತೇವೆ" ಎಂದಿದ್ದಾರೆ.
"ಖಾಸಗಿ ಆಸ್ಪತ್ರೆಗಳು ಹೊಟೇಲ್ ಜೊತೆಗೂಡಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಸ್ಟೆಪ್ ಡೌನ್ ಆಸ್ಪತ್ರೆಗಳ ನಿರ್ಮಾಣ ಮಾಡಲಾಗಿದ್ದು, ಇದರಲ್ಲಿ ಆಕ್ಸಿಜನ್ ಕಾನ್ಸೆಂಟ್ರೇಟರ್, ರೋಗಿಗೆ ಊಟ ಹಾಗೂ ಇತರೆ ಕೊರೊನಾ ಸಂಬಂಧಿತ ಚಿಕಿತ್ಸೆ ಸೌಲಭ್ಯವನ್ನು ನೀಡಲಾಗುವುದು" ಎಂದು ಹೇಳಿದ್ದಾರೆ.