ನವದೆಹಲಿ, ಮೇ 12 (DaijiworldNews/MB) : ''ಕೊರೊನಾ ಲಸಿಕೆಯನ್ನು ಸರಿಯಾಗಿ ವ್ಯವಸ್ಥೆ ಮಾಡಿಕೊಳ್ಳದೆಯೇ ಕೇಂದ್ರ ಸರ್ಕಾರ ಲಸಿಕಾ ಅಭಿಯಾನ (ಟೀಕಾ ಉತ್ಸವ್) ಆರಂಭ ಮಾಡಿದೆ'' ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಟೀಕಿಸಿದ್ದಾರೆ.
''ಕೇಂದ್ರ ಸರ್ಕಾರವು ಏಪ್ರಿಲ್ 11 ರಿಂದ 14ರವರೆಗೆ ಅರ್ಹರಿಗೆ ಲಸಿಕೆ ನೀಡಲು ಅಭಿಯಾನ ಆರಂಭಿಸಿತು. ಹಾಗೆಯೇ ಅಧಿಕ ಲಸಿಕೆ ಉತ್ಪಾದಿಸುವ ದೇಶ ನಮ್ಮದು ಎಂದು ಸರ್ಕಾರ ಹೇಳಿತ್ತು. ಆದರೆ ಈಗ ಲಸಿಕಾ ಅಭಿಯಾನಕ್ಕೆ ಅತೀ ಮುಖ್ಯವಾದ ಲಸಿಕೆಯೇ ಇಲ್ಲ'' ಎಂದು ವ್ಯಂಗ್ಯವಾಡಿದ್ದಾರೆ.
''ದೇಶದಲ್ಲಿ ಲಸಿಕೆ ಹಾಕಿಸುವ ಪ್ರಕ್ರಿಯೆಯಲ್ಲಿ ಶೇ 82ರಷ್ಟು ಕುಸಿತ ಕಂಡು ಬಂದಿದೆ. ದೇಶ ಲಸಿಕೆ ನೀಡುವ ವಿಚಾರದಲ್ಲಿ ಅಮೇರಿಕಾ, ಇಂಗ್ಲೆಂಡ್, ಟರ್ಕಿ ಮತ್ತು ಫ್ರಾನ್ಸ್ನಂತಹ ದೇಶಗಳಿಗಿಂತ ಹಿಂದೆ ಇದೆ. ಅಮೇರಿಕಾ ಸೇರಿದಂತೆ ಬೇರೆ ದೇಶಗಳು ಭಾರತಕ್ಕೂ ಮುನ್ನವೇ ಭಾರತೀಯ ಲಸಿಕಾ ಕಂಪನಿಗಳೊಂದಿಗೆ ಪೂರೈಕೆಯ ಬೇಡಿಕೆ ಸಲ್ಲಿಸಿವೆ. ಆದರೆ ಭಾರತ ತಡವಾಗಿ ಬೇಡಿಕೆ ಸಲ್ಲಿಸಿದೆ. ಈಗ ಇದರ ಜವಾಬ್ದಾರಿಯನ್ನು ಹೊರುವವರು ಯಾರು'' ಎಂದು ಕೇಂದ್ರ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಇನ್ನು ''ಪ್ರತಿ ಮನೆ ಮನೆಗೂ ಲಸಿಕೆ ತಲುಪದೆ ಕೊರೊನಾ ವಿರುದ್ದ ಹೋರಾಟ ನಡೆಸಲಾಗದು'' ಎಂದು ಹೇಳಿರುವ ಪ್ರಿಯಾಂಕ ಗಾಂಧಿ, ''ಲಸಿಕೆ ಕಾರ್ಖಾನೆಗಳಿಗೆ ಮೋದಿ ಅವರು ಭೇಟಿ ನೀಡಿ ಫೋಟೋಗಳನ್ನು ತೆಗೆಸಿಕೊಂಡಿದ್ದರು. ಆದರೆ ಅವರ ಸರ್ಕಾರವು ಲಸಿಕೆಗಾಗಿ ಮೊದಲ ಆದೇಶವನ್ನು 2021ರ ಜನವರಿಯಲ್ಲಿ ಏಕೆ ನೀಡಿತು?'' ಎಂದು ಪ್ರಶ್ನಿಸಿದ್ದಾರೆ.