ನವದೆಹಲಿ, ಮೇ.12 (DaijiworldNews/PY): "ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿ, ಅಧಿಕಾರಿಯೋರ್ವರ ತಪ್ಪಿನಿಂದ ಮುಸ್ಲಿಂ ಸಂಪ್ರದಾಯದ ಪ್ರಕಾರ ದಫನ ಮಾಡಲಾದ ಸಂಜೀವ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲಾಗಿದ್ದು, ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ" ಎಂದು ದೆಹಲಿ ಹೈಕೋರ್ಟ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಈ ಬಗ್ಗೆ ನ್ಯಾಯಮೂರ್ತಿ ಪ್ರತಿಭಾ ಎಂ.ಸಿಂಗ್ ಅವರಿಗೆ ಸರ್ಕಾರಿ ವಕೀಲ ರಿಪುದಮನ್ ಭಾರಧ್ವಾಜ್ ಮಾಹಿತಿ ನೀಡಿದ್ದಾರೆ.
ಸೌದಿ ಅರೇಬಿಯಾದ ಅಧಿಕಾರಿಗಳು ಹಾಗೂ ವಿದೇಶಾಂಗ ಸಚಿವಾಲಯದ ಕೌನ್ಸುಲರ್ ನಿರ್ದೇಶಕ ವಿಷ್ಣು ಕುಮಾರ್ ಶರ್ಮಾ ಅವರು ಈ ಸಮಸ್ಯೆಯನ್ನು ಬಗೆಹರಿಸಿ, ಸಂಜೀವ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಮರಳಿ ಕುಟುಂಬಕ್ಕೆ ನೀಡುವಲ್ಲಿ ನೆರವಾಗಿದ್ದು, ಇವರ ಈ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಕೃತಜ್ಞತೆ ತಿಳಿಸಿದೆ.
ಸಂಜೀವ್ ಕುಮಾರ್ ಅವರು ಸೌದಿಯಲ್ಲಿ ಉದ್ಯೋಗಿಯಾಗಿದ್ದು, ಜನವರಿ 24ರಂದು ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಸಂಜೀವ್ ಅವರ ಮೃತದೇಹವನ್ನು ಅಲ್ಲಿನ ಅಸ್ಪತ್ರೆಯಲ್ಲಿ ಇರಿಸಲಾಗಿತ್ತು. ಆದರೆ, ಸಂಜೀವ್ ಅವರ ಮೃತದೇಹವನ್ನು ದಫನ ಮಾಡಲಾಗಿದೆ ಎಂದು ಫೆ.18ರಂದು ಅವರ ಕುಟುಂಬಕ್ಕೆ ತಿಳಿಸಲಾಗಿತ್ತು. ಜೆಡ್ಡಾದಲ್ಲಿನ ಭಾರತೀಯ ರಾಜತಾಂತ್ರಿಕ ಕಛೇರಿಯಲ್ಲಿರುವ ಭಾಷಾಂತರ ವಿಭಾಗದ ಅಧಿಕಾರಿಯೋರ್ವ ಧರ್ಮವನ್ನು ನಮೂದಿಸುವ ಸಂದರ್ಭ ಮುಸ್ಲಿಂ ಎಂದು ತಪ್ಪಾಗಿ ನಮೂಸಿದ್ದರು. ಈ ಕಾರಣದಿಂದ ಸಂಜೀವ್ ಅವರ ಮೃತದೇಹವನ್ನು ದಫನ ಮಾಡಲಾಗಿತ್ತು.
"ಪತಿಯ ಮೃತದೇಹದ ಅಂತ್ಯ ಸಂಸ್ಕಾರ ನಡೆಸುವುದಕ್ಕೆ ಅವಕಾಶ ಮಾಡಿಕೊಡಬೇಕು" ಎಂದು ಕೋರಿ ಸಂಜೀವ್ ಕುಮಾರ್ ಅವರ ಪತ್ನಿ ಅಂಜು ಶರ್ಮ ಅಧಿಕಾರಿಗಳಿಗೆ ಮನವಿ ಮಾಡಿದ್ದರು.