ಬಿಹಾರ, ಮೇ.12 (DaijiworldNews/PY): ಕೊರೊನಾ ಸೋಂಕಿಗೆ ತುತ್ತಾದ ತನ್ನ ಪತಿಯನ್ನು ಉಳಿಸಿಕೊಳ್ಳಲು ಆಸ್ಪತ್ರೆಗೆ ಹೋದ ಮಹಿಳೆಗೆ ಆಸ್ಪತ್ರೆಯ ಸಿಬ್ಬಂದಿ ಲೈಂಗಿಕ ಕಿರುಕುಳ ನೀಡಿದ ಘಟನೆ ಬಿಹಾರದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
"ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ನನ್ನ ಪತಿಯನ್ನು ಉಳಿಸಿಕೊಳ್ಳಲು ಆಸ್ಪತ್ರೆಗೆ ಹೋದ ಸಂದರ್ಭ ಆಸ್ಪತ್ರೆಯ ಸಿಬ್ಬಂದಿಯೋರ್ವ ನನ್ನ ದುಪ್ಪಟ ಎಳೆದು ಸೊಂಟಕ್ಕೆ ಕೈ ಹಾಕಿ ಕಿರುಕುಳ ನೀಡಿದ್ದಾರೆ. ಈ ಬಗ್ಗೆ ಧ್ವನಿ ಎತ್ತೋಣ ಎಂದರೆ ಆಸ್ಪತ್ರೆಯಲ್ಲಿ ನನ್ನ ಪತಿ ಹಾಗೂ ತಾಯಿ ದಾಖಲಾಗಿದ್ದರು. ಅವರ ಪ್ರಾಣ ಉಳಿಯುವುದು ಮುಖ್ಯವಾಗಿತ್ತು. ಹಾಗಾಗಿ ನಾನು ಕಿರುಕುಳ ಸಹಿಸಿಕೊಂಡೆ. ಪತಿಗೆ ಹಾಗೂ ತಾಯಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಬೇಡಿಕೊಂಡಿದ್ದು, ಆದರೂ, ವೈದ್ಯರು ನನ್ನ ಪತಿಗೆ ಸೂಕ್ತಾದ ಚಿಕಿತ್ಸೆ ನೀಡಿಲಿಲ್ಲ. ನನ್ನ ಪತಿ ಸಾವನ್ನಪ್ಪಿದ್ದಾರೆ" ಎಂದು ಸಂತ್ರಸ್ತೆ ಬೇಸರ ವ್ಯಕ್ತಪಡಿಸಿದ ವಿಡಿಯೋ ವೈರಲ್ ಆಗಿದೆ.
ಘಟನೆಗೆ ಸಂಬಂಧಿಸಿದಂತೆ ಮಹಿಳೆ ಬಿಹಾರದ ಭಾಗಲ್ಪುರದ ಖಾಸಗಿ ಆಸ್ಪತ್ರೆ ವಿರುದ್ಧ ದೂರು ದಾಖಲಿಸಿದ್ದಾರೆ. ಘಟನೆಯ ಬಗ್ಗೆ ಮಹಿಳೆ ವಿಡಿಯೋದಲ್ಲಿ ತಿಳಿಸಿದ್ದಾರೆ.
"ಆಸ್ಪತ್ರೆಯ ವೈದ್ಯರ ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯದ ಕಾರಣ ನನ್ನ ಪತಿ ಸಾವನ್ನಪ್ಪಿದ್ದಾರೆ. ಕೊರೊನಾ ತಗುಲಿ ಅಸ್ವಸ್ಥರಾಗಿದ್ದ ನನ್ನ ಪತಿಗೆ ಚಿಕಿತ್ಸೆ ನೀಡಲು ಮೂರು ಆಸ್ಪತ್ರೆಗೆ ಅಲೆದಾಡಿದ್ದೇನೆ. ಕೊನೆಗೆ ಗ್ಲೋಕಲ್ ಆಸ್ಪತ್ರೆಗೆ ದಾಖಲಿಸಿದೆ. ಅಲ್ಲಿ ಕೊಳಕು ಹಾಸಿಗೆಯ ಮೇಲೆಯೇ ನನ್ನ ಪತಿಯನ್ನು ಮಲಗಿಸಿದ್ದಾರೆ. ಹಾಸಿಗೆಯನ್ನು ಬದಲಿಸಿ, ಸ್ವಚ್ಛವಾಗಿರುವ ಬೆಡ್ ಶೀಟ್ ನೀಡಿ ಎಂದು ಆಸ್ಪತ್ರೆಯ ಅಟೆಂಡರ್ ಜ್ಯೋತಿಕುಮಾರ್ಗೆ ಮನವಿ ಮಾಡಿದೆ. ನನ್ನ ಅಸಹಾಯಕತೆಯನ್ನೇ ಬಂಡವಾಳವಾಗಿಸಿಕೊಂಡ ಆತ ನನಗೆ ಕಿರುಕುಳ ನೀಡಿದ್ದಾನೆ. ನನ್ನ ಪತಿ ಹಾಗೂ ತಾಯಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡದಿದ್ದರೆ ಎನ್ನುವ ಕಾರಣದಿಂದ ಪರಿಸ್ಥಿತಿಯ ಬಗ್ಗೆ ಯಾರಲ್ಲೂ ಹೇಳಿಕೊಳ್ಳಲಾಗಲಿಲ್ಲ. ಹಾಗಾಗಿ ಇವೆಲ್ಲವನ್ನೂ ಸಹಿಸಿಕೊಂಡೆ" ಎಂದು ಕಣ್ಣೀರು ಹಾಕಿದ್ದಾರೆ.
"ಆಸ್ಪತ್ರೆಯಲ್ಲಿ ತುಂಬಾ ನಿರ್ಲಕ್ಷ್ಯವಿತ್ತು. ವೈದ್ಯರು ಹಾಗೆ ಬಂದು ಹೋಗುತ್ತಿದ್ದರು, ಸಿಬ್ಬಂದಿಗಳು ಕೂಡಾ ಇರುತ್ತಿರಲಿಲ್ಲ. ಅಲ್ಲದೇ, ಔಷಧ ಕೊಡಲು ನಿರಾಕರಿಸುತ್ತಿದ್ದರು. ನನ್ನ ತಾಯಿಯ ಸ್ಥಿತಿ ಪರವಾಗಿರಲಿಲ್ಲ. ಆದರೆ, ನನ್ನ ಪತಿಗೆ ಮಾತನಾಡಲು ಸಾಧ್ಯವಾಗದ ಕಾರಣ ಅವರು ನೀರಿಗಾಗಿ ಕೈಸನ್ನೆ ಮಾಡುತ್ತಿದ್ದರು. ಆದರೆ, ಯಾರೂ ಕೂಡಾ ನೀರು ಕೊಡುತ್ತಿರಲಿಲ್ಲ. ವೈದ್ಯರ ನಿರ್ಲಕ್ಷ್ಯದಿಂದ ನನ್ನ ಪತಿ ಸಾವನ್ನಪ್ಪಿದ್ದಾರೆ" ಎಂದು ಮಹಿಳೆ ಆರೋಪಿಸಿದ್ದಾರೆ.
"ಇದಕ್ಕೂ ಮೊದಲು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಪತಿಯನ್ನು ಮಾಯಾಗಂಜ್ನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆಕ್ಸಿಜನ್ ಇಲ್ಲ ಎಂದು ಹೇಳಿ ಕಳುಹಿಸಿದ್ದರು. ಬಳಿಕ ಪಾಟ್ನಾದ ಖಾಸಗಿ ಆಸ್ಪತ್ರೆಗೆ ಹೋದೆ ಅಲ್ಲಿ ಸಿಬ್ಬಂದಿ ಬ್ಲಾಕ್ ಮಾರ್ಕೆಟ್ನಲ್ಲಿ ಆಕ್ಸಿಜನ್ ಸಿಲಿಂಡರ್ ಖರೀದಿ ಮಾಡುವಂತೆ ಒತ್ತಾಯಿಸಿದ್ದರು" ಎಂದು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಹಿಳೆ ಮಾಡಿದ ಆರೋಪದಿಂದ ಎಚ್ಚೆತ್ತ ಅಧಿಕಾರಿಗಳು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿದ್ದು, ತನಿಖೆ ನಡೆಸಿದ್ದಾರೆ. ಅಲ್ಲದೇ, ಗ್ಲೋಕಲ್ ಆಸ್ಪತ್ರೆಯ ಅಟೆಂಡರ್ ಅನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಪ್ರಕರಣದ ಬಗ್ಗೆ ತನಿಖೆ ಕೈಗೊಳ್ಳಲು ಸಮಿತಿ ರಚಿಸಲಾಗಿದೆ.