ಬಸ್ತಾರ್, ಮೇ 12 (DaijiworldNews/MS): ಕೋವಿಡ್ ಸಾಂಕ್ರಾಮಿಕ ಸೋಂಕು ಸಾಂಕ್ರಾಮಿಕ ಮಾವೋವಾದಿಗಳನ್ನು ಹೈರಣಾಗಿಸಿದ್ದು ನಕ್ಸಲ್ ಪೀಡಿತ ಛತ್ತೀಸ್ ಘಡದ ಬಸ್ತಾರ್ ಪ್ರಾಂತ್ಯದಲ್ಲಿ ಹಲವು ಮಂದಿ ಮಾವೋ ಕ್ಯಾಂಪ್ ನಲ್ಲಿ ತೊರೆದುಹೋಗುತ್ತಿದ್ದಾರೆ.
"ದಕ್ಷಿಣ ಬಸ್ತಾರ್ನ ಅರಣ್ಯ ಪ್ರದೇಶಗಳಲ್ಲಿ ಅವಿತಿರುವ ನಕ್ಸಲರ ಕ್ಯಾಂಪ್ ಗಳಲ್ಲಿ ಸೋಂಕಿಗೆ ತುತ್ತಾಗಿ 8 ಮಂದಿ ಸಾವಿಗೀಡಾದ ಹಿನ್ನಲೆಯಲ್ಲಿ ಶಿಬಿರದಲ್ಲಿರುವ ಮಾವೋವಾದಿಗಳಿ ಭೀತಿ ಸೃಷ್ಟಿಯಾಗಿದ್ದು, ಹಲವು ನಕ್ಸಲರು ಸೋಂಕಿನ ಭೀತಿಯಿಂದಾಗಿ ತಂಡ ತೊರೆಯುತ್ತಿದ್ದಾರೆ. ಅಲ್ಲಿರುವ ತಂಡದ ಇತರರಿಗೂ ಸೋಂಕು ಹರಡಿದ್ದು, ಸೂಕ್ತ ಚಿಕಿತ್ಸೆ ಸಿಗದೇ ಹಲವರ ಸ್ಥಿತಿ ಗಂಭೀರವಾಗಿದೆ " ಎಂದು ಬಸ್ತಾರ್ ಐಜಿ ಸುಂದರ್ ರಾಜ್ ಪಿ ಹೇಳಿದ್ದಾರೆ
ಈ ನಡುವೆ ಮಹಿಳಾ ಮಾವೋ ನಾಯಕಿ ಗೊಂಡಿ ಭಾಷೆಯಲ್ಲಿ ತಮ್ಮ ಸಹಚರರಿಗೆ ಬರೆದ ಪತ್ರವೊಂದು ದೊರಕಿದ್ದು, ಇದರಲ್ಲಿ, ನಾವು ಜೀವಂತವಾಗಿದ್ದರೆ, ಆಗ ಮಾತ್ರ ನಾವು ಕ್ರಾಂತಿಯನ್ನು ಮುಂದೆ ಸಾಗಿಸಬಹುದು, ಸೋಂಕು ವೇಗವಾಗಿ ಹರಡುತ್ತಿದೆ, ನಾನು ಎಲ್ಲರನ್ನೂ ಎಚ್ಚರಿಸಲು ಪ್ರಯತ್ನಿಸಿದ್ದು ಆದರೆ ಹಿರಿಯ ವಲಯ ಸದಸ್ಯರು ನನ್ನನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ನಕ್ಸಲರ ಸಾಂಸ್ಕ್ರತಿಕ ವಿಭಾಗವಾದ ಚೇತ್ನಾ ನಾಡ್ಯ ಮಂಡಲಿ ಮತ್ತು ಪೀಪಲ್ಸ್ ಲಿಬರೇಷನ್ ಗೆರಿಲ್ಲಾ ಆರ್ಮಿಯ ಸುಮಾರು 7 ರಿಂದ 8 ಮಂದಿ ಕಾಮ್ರೇಡ್ ಗಳು ಸೋಂಕಿಗೆ ಬಲಿಯಾಗಿದ್ದಾರೆ. ಮೂರು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಈ ಕುರಿತು ದಂತೇವಾಡ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ್ ಅವರು ನಕ್ಸಲರ ಸಾವನ್ನು ದೃಢಪಡಿಸಿದ್ದು, ಸುಮಾರು 400 ಮಾವೋವಾದಿಗಳು ಈವರೆಗೆ ಕಾಡಿನಲ್ಲಿ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ. 20 ದಿನಗಳ ಹಿಂದೆ 500ಕ್ಕೂ ಹೆಚ್ಚು ಜನ ಭಾಗವಹಿಸಿದ್ದ ನಕ್ಸಲರ ಬೃಹತ್ ರ್ಯಾಲಿ ಸೋಂಕು ಪ್ರಸರಣಕ್ಕೆ ಕಾರಣವಾಗಿರಬಹುದು ಎಂದು ಅನುಮಾನಿಸಿದ್ದಾರೆ.
ಇನ್ನೊಂದೆಡೆ, ಅರಣ್ಯ ಪ್ರದೇಶಗಳ ಸಮೀಪದಲ್ಲಿರುವ ಹಳ್ಳಿಗಳಲ್ಲಿ ನಕ್ಸಲರ ಸಭೆಗಳು ಮುಂದುವರಿದಿದ್ದು ಈ ಹಳ್ಳಿಗಳಲ್ಲಿ 2 ಲಕ್ಷ ಬುಡಕಟ್ಟು ಜನರು ವಾಸಿಸುತ್ತಿದ್ದಾರೆ. ಅವರಿಗೂ ವೈರಸ್ ಸೋಂಕು ತಗಲುವು ಭೀತಿ ಇದೆ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.