ಇಂದೋರ್, ಮೇ 12 (DaijiworldNews/MB) : ಈಗಾಗಲೇ ಕೊರೊನಾ ಸೋಂಕಿಗೆ ಸಂಬಂಧಿಸಿ ಹಲವು ವಿವಾದಾತ್ಮಕ ಹೇಳಿಕೆ ನೀಡಿರುವ ಮಧ್ಯಪ್ರದೇಶ ಸಚಿವೆ ಉಷಾ ಠಾಕೂರ್ ಈಗ ಕೊರೊನಾ ಮೂರನೇ ಅಲೆ ಭಾರತವನ್ನು ತಲುಪಬಾರದು ಎಂದಾದರೆ ನಾಲ್ಕು ದಿನ ಯಜ್ಞ ಚಿಕಿತ್ಸೆ ನಡೆಸಬೇಕು ಎಂದು ಹೇಳಿದ್ದಾರೆ.
ಇಂದೋರ್ನಲ್ಲಿ ಕೋವಿಡ್ ಆರೈಕೆ ಕೇಂದ್ರವನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕೊರೊನಾ ಮೂರನೇ ಅಲೆಯನ್ನು ತಡೆಯಲು ನಾಲ್ಕು ದಿನಗಳ ಕಾಲ ಯಜ್ಞ ಚಿಕಿತ್ಸೆ ನಡೆಸಬೇಕು. ಇದರಿಂದಾಗಿ ಭಾರತವನ್ನು ಮೂರನೇ ಅಲೆ ತಲುಪಲು ಸಾಧ್ಯವಾಗುವುದಿಲ್ಲ'' ಎಂದು ಹೇಳಿದ್ದಾರೆ.
''ಈಗ ಭಾರತದಲ್ಲಿ ಎರಡನೇ ಅಲೆ ಹಲವು ಸಮಸ್ಯೆಗಳನ್ನು ಸೃಷ್ಟಿ ಮಾಡಿದೆ. ಆರೋಗ್ಯ ಮೂಲ ಸೌಕರ್ಯ ವ್ಯವಸ್ಥೆಗೂ ಈ ಎರಡನೇ ಅಲೆ ತೊಂದರೆ ಉಂಟು ಮಾಡಿದೆ. ಆರೋಗ್ಯ ಕಾರ್ಯಕರ್ತರಿಗೂ ಅಧಿಕ ಹೊರೆ ಉಂಟು ಮಾಡಿದೆ. ಈ ಹಿನ್ನೆಲೆ ಪರಿಸರ ಶುದ್ಧೀಕರಣಕ್ಕಾಗಿ, ನಾಲ್ಕು ದಿನಗಳ ಕಾಲ ಯಜ್ಞವನ್ನು ಮಾಡಬೇಕು'' ಎಂದಿದ್ದಾರೆ.
''ಹಿಂದಿನ ಕಾಲದಲ್ಲಿ, ನಮ್ಮ ಪೂರ್ವಜರು ಸಾಂಕ್ರಾಮಿಕ ರೋಗಗಳನ್ನು ತಡೆಯಲು, ನಾಶ ಮಾಡಲು ಯಜ್ಞ ಮಾಡುತ್ತಿದ್ದರು. ಇದನ್ನು ಯಜ್ಞ ಚಿಕಿತ್ಸೆ ಎಂದು ಹೇಳುತ್ತಾರೆ. ಈಗ ಈ ಎರಡನೇ ಕೊರೊನಾ ಅಲೆಯ ಸಂದರ್ಭ ಯಜ್ಞ ಚಿಕಿತ್ಸೆ ಮಾಡಿದರೆ ಕೊರೊನಾ ಮೂರನೇ ಅಲೆ ಭಾರತವನ್ನು ಮುಟ್ಟಲಾರದು'' ಎಂದು ಹೇಳಿದ್ದಾರೆ.
ಇನ್ನು ''ಮೂರನೇ ಅಲೆಯು ಮಕ್ಕಳಿಗೆ ಮಾರಕ ಎಂಬುದು ತಜ್ಞರು ಹೇಳಿದ್ದಾರೆ. ಈ ಹಿನ್ನೆಲೆ ಈಗಾಗಲೇ ಮಧ್ಯಪ್ರದೇಶ ಸರ್ಕಾರವು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ'' ಎಂದು ಕೂಡಾ ಈ ಸಂದರ್ಭದಲ್ಲೇ ಸಚಿವೆ ಉಷಾ ಠಾಕೂರ್ ತಿಳಿಸಿದ್ದಾರೆ.
ಇನ್ನು ಈ ಹಿಂದೆ ''ಹರಿದ ಜೀನ್ಸ್ ಹಾಕುವುದು ಅಪಶಕುನ'' ಎಂದು ಅವರು ಹೇಳಿದ್ದರು. ಹಾಗೆಯೇ ಕೊರೊನಾ ವೈರಸ್ ಎದುರಿಸಲು ನನ್ನ ಬಳಿ "ರೋಗನಿರೋಧಕ" ಇದೆ ಎಂದು ಹೇಳಿ ಮಾಸ್ಕ್ ಧರಿಸಲು ನಿರಾಕರಿಸಿದ್ದರು. ''ಹನುಮಾನ್ ಚಾಲೀಸಾ ಪಠಣ ಮತ್ತು ಹಸುವಿನ ಸೆಗಣಿಯಿಂದ ಹವನ ಮಾಡುವುದರಿಂದ ನಾನು ದಿನದ 24 ಗಂಟೆಯೂ ಸಾನಿಟೈಸ್ ಆಗಿ ಇರುತ್ತೇನೆ'' ಎಂದು ಹೇಳಿಕೊಂಡಿದ್ದರು.