ಬೆಂಗಳೂರು, ಮೇ.12 (DaijiworldNews/PY): ಕೊರೊನಾ ಲಸಿಕೆ ವಿಚಾರದ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಟ್ವೀಟ್ ವಾರ್ ನಡೆಯುತ್ತಿದ್ದು, "ನಿರಾತಂಕವಾಗಿ ನಡೆಯುತ್ತಿದ್ದ ಲಸಿಕೆ ಅಭಿಯಾನಕ್ಕೆ ಹುಳಿ ಹಿಂಡಿದ್ದೇ ಕಾಂಗ್ರೆಸ್. ಜನರ ಮನಸಿನಲ್ಲಿ ಹುಳಿ ಹಿಂಡಿದ ಬುರುಡೆರಾಮಯ್ಯ, ಸಮಾಜದಲ್ಲಿ ಅನುಮಾನದ ಹಾವು ಬಿಟ್ಟರು" ಎಂದು ಬಿಜೆಪಿ ಆರೋಪಿಸಿದೆ.
ಈ ಬಗ್ಗೆ ಬಿಜೆಪಿ ಟ್ವೀಟ್ ಮಾಡಿದ್ದು, "ನಿರಾತಂಕವಾಗಿ ನಡೆಯುತ್ತಿದ್ದ ಲಸಿಕೆ ಅಭಿಯಾನಕ್ಕೆ ಹುಳಿ ಹಿಂಡಿದ್ದೇ ಕಾಂಗ್ರೆಸ್. ಜನರ ಮನಸಿನಲ್ಲಿ ಹುಳಿ ಹಿಂಡಿದ ಬುರುಡೆರಾಮಯ್ಯ, ಸಮಾಜದಲ್ಲಿ ಅನುಮಾನದ ಹಾವು ಬಿಟ್ಟರು. ಜನರಿಗೆ ಆತ್ಮ ಸ್ಥೈರ್ಯ ತುಂಬುವ ಒಂದು ಕೆಲಸವನ್ನಾದರೂ ಕಾಂಗ್ರೆಸ್ ಮಾಡಿದೆಯೇ?" ಎಂದು ಪ್ರಶ್ನಿಸಿದೆ.
"ನಾನು ಅಕ್ಕಿ ಕೊಟ್ಟೆ, ಇಂದಿರಾ ಕ್ಯಾಂಟೀನಲ್ಲಿ ಊಟ ಕೊಟ್ಟೆ ನಾನು, ನಾನು, ನಾನು..! ಏನು ನಿಮ್ಮ ಪಿತ್ರಾರ್ಜಿತ ಆಸ್ತಿಯ ದುಡ್ಡಿನಲ್ಲಿ ಕೊಟ್ಟಿದ್ದೇ ಸಿದ್ದರಾಮಯ್ಯ? ಎಲ್ಲದಕ್ಕೂ ನಾನು ಎನ್ನುವ ಕಾಂಗ್ರೆಸ್ ಪಕ್ಷದ ನಾಯಕರು ಕೋವಿಡ್ ಸಂದರ್ಭದಲ್ಲಿ ರಾಜ್ಯದ ಜನತೆಗೆ ಮಾಡಿದ್ದೇನು?" ಎಂದು ಕೇಳಿದೆ.
"ವ್ಯಾಕ್ಸಿನ್ ಬಾಕ್ಸ್ ಮೇಲೆ ಪ್ರಧಾನಿ ಚಿತ್ರ ಏಕೆ, ಕೋವಿಡ್ ಕಿಟ್ ಮೇಲೆ ಬಿಜೆಪಿ ಚಿಹ್ನೆ ಏಕೆ ಎಂದು ಪ್ರಶ್ನಿಸಿದ್ದ ಸಿದ್ದರಾಮಯ್ಯ ಮಾಡಿದ್ದೇನು? ಬಡವರಿಗೆ ಕೊಡುವ ದಿನಸಿ ಚೀಲದ ಮೇಲೆ ಪುತ್ರನ ಚಿತ್ರ ಹಾಕಿದ್ದು ಎಷ್ಟು ಸರಿ? ಆಚಾರ ಹೇಳುವುದಕ್ಕೆ, ಬದನೆಕಾಯಿ ತಿನ್ನುವುದಕ್ಕೆ ಅಲ್ವೇ ಬುರುಡೆರಾಮಯ್ಯ?" ಎಂದು ವ್ಯಂಗ್ಯವಾಡಿದೆ.
"ಕೊರೊನಾ ಲಸಿಕೆ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, 1 ಕೋಟಿ ಲಸಿಕೆ ಆರ್ಡರ್ ಮಾಡಿದ್ದೇವೆ ಎಂದರು, ಲಸಿಕೆ ಉತ್ಸವ ಎಂಬ ಅಬ್ಬರದ ಪ್ರಚಾರ ಮಾಡಿದ್ದರು, ಲಸಿಕೆ ಪೂರೈಸಿದ ಕಂಪೆನಿಯ ಪಟ್ಟಿಯಲ್ಲಿ ರಾಜ್ಯದ ಹೆಸರೇ ಇಲ್ಲ, ಕೇಂದ್ರ ರಾಜ್ಯದ ಹೆಸರನ್ನು ಪಟ್ಟಿಯಲ್ಲಿ ಸೇರಿಸಿಲ್ಲ, ಈಗ ಬೊಬ್ಬೆ ಹಾಕಬೇಡಿ ಎನ್ನುತ್ತಿದ್ದಾರೆ ಸಿಎಂ, ಬಿಜೆಪಿ ಸರ್ಕಾರದ ವೈಫಲ್ಯವನ್ನು ಸ್ವತಃ ಕೋರ್ಟ್ ಎತ್ತಿ ಹಿಡಿದಿದೆ" ಎಂದು ತಿಳಿಸಿದೆ.
"ಒಂದು ಕಡೆ ಇಂದಿರಾ ಕ್ಯಾಂಟೀನ್ನಲ್ಲಿ ಊಟ ಕೊಡುತ್ತೇವೆ ಎನ್ನುತ್ತೀರಿ, ಇನ್ನೊಂದು ಕಡೆ ಹೊರಬಂದರೆ ಪೊಲೀಸರ ಲಾಠಿ ಏಟು ಕೊಡುತ್ತೀರಿ. ಆಹಾರ ವಿತರಣೆ ಸಮಯದ ಬಗ್ಗೆ ಸ್ಪಷ್ಟತೆ ಇಲ್ಲ. ಇನ್ನೂ ಕೂಡ ಗುತ್ತಿಗೆದಾರರ ಬಿಲ್ ಬಾಕಿ ಪಾವತಿಸಿಲ್ಲ ಬಿಎಸ್ವೈ ಅವರೇ ನಿಮ್ಮ ನಿಲುವು, ನಿರ್ಧಾರ, ನಿಯಮಗಳು ಸದಾ ಗೊಂದಲಮಯ ಹಾಗೂ ಅತಾರ್ಕಿಕವಾಗಿರುತ್ತವಲ್ಲ ಏಕೆ?" ಎಂದು ಪ್ರಶ್ನಿಸಿದೆ.
"ವ್ಯಾಕ್ಸಿನ್ ನೀಡುವಿಕೆಯಲ್ಲಿ ಹೈಕೋರ್ಟ್ನಿಂದ ನಿಲನಕ್ಷೆ ರೂಪಿಸಿ ಎಂಬ ನಿರ್ದೇಶನ ಬಂದಿದೆ. ಎಲ್ಲದರಲ್ಲಿಯೂ ಕೋರ್ಟ್ನಿಂದ ಚಾಟಿ ಏಟು ಪಡೆಯುವಷ್ಟು ಈ ಸರ್ಕಾರ ಗತಿಗೆಟ್ಟಿರುವುದು ರಾಜ್ಯದ ದುರ್ದೈವ. ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರಕ್ಕೆ ಸ್ಪಷ್ಟ ಕಾರ್ಯಸೂಚಿ ಇಲ್ಲದೆ ಜನತೆಗೆ ಮಸಣದ ದಾರಿ ತೋರುತ್ತಿದೆ' ಎಂದಿದೆ.