ಬೆಂಗಳೂರು, ಮೇ.12 (DaijiworldNews/PY): "ಕೊರೊನಾ ಬಳಿಕ ಕೆಲವು ಕಡೆಗಳಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ. ಈ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ನಡೆಸಿದ ಬಳಿಕ ಎರಡು ದಿನಗಳೊಳಗೆ ಸರ್ಕಾರಕ್ಕೆ ವರದಿ ನೀಡುವಂತೆ ಕೊರೊನಾ ತಾಂತ್ರಿಕ ಸಲಹಾ ಸಮಿತಿಗೆ ಸೂಚನೆ ನೀಡಿದ್ದೇನೆ. ಇದರ ವರದಿ ಬಂದ ಬಳಿಕ ಚಿಕಿತ್ಸಾ ವಿಧಾನದ ಕುರಿತು ನಿರ್ಧಾರ ಕೈಗೊಳ್ಳಲಾಗುವುದು" ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳ ತಾಲ್ಲೂಕು ಆಸ್ಪತ್ರೆಗಳಲ್ಲಿನ ಚಿಕಿತ್ಸಾ ವ್ಯವಸ್ಥೆಯ ಪರಿಶೀಲನೆಗೆ ಹೊರಡುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬ್ಲ್ಯಾಕ್ ಫಂಗಸ್ ಬಗ್ಗೆ ವರದಿ ಬಂದ ಬಳಿಕ ಸರ್ಕಾರದ ನಿಲುವು ಏನು ಎನ್ನುವುದರ ಬಗ್ಗೆ ಎರಡು ದಿನಗಳೊಳಗೆ ನಿರ್ಧರಿಸುತ್ತೇವೆ" ಎಂದು ಹೇಳಿದ್ದಾರೆ.
ನಗರ ಪ್ರದೇಶಗಳಿಂದ ಹಳ್ಳಿಗಳ ಕಡೆಗೆ ಸೋಂಕು ವ್ಯಾಪಿಸುತ್ತಿರುವ ವಿಚಾರ ಗಮನಕ್ಕೆ ಬಂದಿದ್ದು, ಈ ಹಿನ್ನೆಲೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ "ಹೆಚ್ಚಿಸಲಾಗುತ್ತದೆ. ಕೊರೊನಾ ಕೇರ್ ಸೆಂಟರ್ಗಳು ಸೇರಿದಂತೆ ಸ್ಟೆಪ್ಡೌನ್ ಆಸ್ಪತ್ರೆಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ಕುರಿತು ಹಲವಾರು ಸುತ್ತಿನ ಚರ್ಚೆ ನಡೆದಿದೆ" ಎಂದಿದ್ಧಾರೆ.
"ಅನೆಸ್ತೀಶಿಯಾ, ಫಿಸಿಶಿಯನ್ ಕೊರತೆ ಇರುವ ಕಡೆ ಸಮೀಪದ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಂದ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ 780 ತಜ್ಞ ವೈದ್ಯರ ಸಹಿತ 2,480 ವೈದ್ಯಕೀಯ ಸಿಬ್ಬಂದಿಯ ನೇಮಕಾತಿಯ ಪ್ರಕ್ರಿಯೆ ಪೂರ್ಣವಾಗಲಿದ್ದು, ಈ ಮೂಲಕ ತಾಲೂಕುಗಳಲ್ಲಿ ವೈದ್ಯರ ಕೊರತೆ ನಿವಾರಣೆಯಾಗಲಿದೆ" ಎಂದು ತಿಳಿಸಿದ್ದಾರೆ.