ನವದೆಹಲಿ, ಮೇ 12 (DaijiworldNews/MB) : ಭಾರತ್ ಬಯೋಟೆಕ್ ತನ್ನ ಕೊರೊನಾ ಲಸಿಕೆ ಕೋವಾಕ್ಸಿನ್ ಸರಬರಾಜನ್ನು ಮುಂದುವರಿಸುವುದಾಗಿ ಮಂಗಳವಾರ ತಿಳಿಸಿದ್ದು, ಮೇ 1 ರಿಂದ ಲಸಿಕೆಯನ್ನು 18 ರಾಜ್ಯಗಳಿಗೆ ಸರಬರಾಜು ಮಾಡಲಾಗಿದೆ ಎಂದು ಹೇಳಿದೆ. ಈ ಹಿಂದೆ ಕರ್ನಾಟಕ ಹೊರತುಪಡಿಸಿ 14 ರಾಜ್ಯಗಳಿಗೆ ಲಸಿಕೆ ನೇರ ಪೂರೈಕೆ ಮಾಡುವುದಾಗಿ ತಿಳಿಸಿದ್ದ ಸಂಸ್ಥೆ ಈಗ ಕರ್ನಾಟಕ ಸೇರಿದಂತೆ 18 ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತದೆ ಎಂದು ಹೇಳಿದೆ.
ಈ ಹಿಂದೆ ಹೈದರಾಬಾದ್ ಮೂಲದ ಈ ಸಂಸ್ಥೆಯು ಕೇಂದ್ರ ಸರ್ಕಾರವು ಪಡೆದ ಹಂಚಿಕೆಯ ಆಧಾರದ ಮೇಲೆ ಆಂಧ್ರಪ್ರದೇಶ, ಅಸ್ಸಾಂ, ಛತ್ತೀಸಗಢ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಕ್ಕೆ ಲಸಿಕೆಗಳನ್ನು ನೇರವಾಗಿ ಕೋವಾಕ್ಸಿನ್ ಪೂರೈಸುತ್ತಿತ್ತು.
ಇದೀಗ ಈ ಬಗ್ಗೆ ಟ್ವೀಟ್ ಮಾಡಿರುವ ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸುಚಿತ್ರಾ ಎಲಾ, ''ಕೋವಾಕ್ಸಿನ್ ಮೇ 10 ರಂದು ಸರಬರಾಜು ಆಗಿದೆ. 18 ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ. ಕೆಲವು ರಾಜ್ಯಗಳು ನಮ್ಮ ಈ ಹಿಂದಿನ ಸರಬರಾಜು ಉದ್ದೇಶದ ಬಗ್ಗೆ ದೂರಿರುವುದು ತಂಡಗಳಿಗೆ ಸಾಕಷ್ಟು ನಿರಾಶೆ ಉಂಟು ಮಾಡಿದೆ. ನಮ್ಮ 50 ಉದ್ಯೋಗಿಗಳು ಕೊರೊನಾ ಕಾರಣದಿಂದಾಗಿ ಕೆಲಸ ನಿರ್ವಹಿಸುತ್ತಿಲ್ಲ. ಆದರೂ ನಾವು ನಿಮಗಾಗಿ ಕೊರೊನಾ ಲಾಕ್ಡೌನ್ಗಳ ನಡುವೆಯೂ 24x7 ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ'' ಎಂದು ಹೇಳಿದ್ದಾರೆ.
ಹಾಗೆಯೇ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್ಗಢ, ದೆಹಲಿ, ಗುಜರಾತ್, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು, ತ್ರಿಪುರಾ, ತೆಲಂಗಾಣ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಿಗೆ ಕೊರೊನಾ ಲಸಿಕೆ ಪೂರೈಸುವುದಾಗಿ ತಿಳಿಸಿದ್ದಾರೆ.