ಹೈದರಾಬಾದ್, ಮೇ.12 (DaijiworldNews/PY): ಇಲ್ಲಿನ ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಕೇಂದ್ರ ಸಭಾಂಗಣಕ್ಕೆ ಉಡುಪಿಯ ವಡ್ಡರ್ಸೆ ಮೂಲದ ಐಪಿಎಸ್ ಅಧಿಕಾರಿ ದಿ.ಮಧುಕರ್ ಶೆಟ್ಟಿ ಅವರ ಹೆಸರನ್ನು ಇಡಲಾಗಿದೆ.
ಸೇವಾ ಮನೋಭಾವ, ವೃತ್ತಿಪರತೆ ಹಾಗೂ ಬದ್ದತೆಗೆ ಹೆಸರಾಗಿದ್ದ ಮಧುಕರ್ ಶೆಟ್ಟಿ ಅವರನ್ನು ಹೆಸರನ್ನು ಪೊಲೀಸ್ ಅಕಾಡೆಮಿ ಕೇಂದ್ರದ ಮುಖ್ಯ ಸಭಾಂಗಣಕ್ಕೆ ಇಟ್ಟಿರುವ ಕುರಿತು ಪೊಲೀಸ್ ಅಕಾಡೆಮಿ ಕೇಂದ್ರ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಉಡುಪಿಯ ವಡ್ಡರ್ಸೆಯ ಮಧುಕರ್ ಸೆಟ್ಟಿ ಅವರು 1999ನೇ ಬ್ಯಾಚ್ನ ಐಪಿಎಸ್ ಅಧಿಕಾರಿ. ಇವರು, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದರು.
ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭ 2018ರ ಡಿಸೆಂಬರ್ನಲ್ಲಿ ಅನಾರೋಗ್ಯದಿಂದಾಗಿ ಅವರನ್ನು ಹೈದರಾಬಾದ್ನ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಡಿಸೆಂಬರ್ 28ರಂದು ಮೃತಪಟ್ಟಿದ್ದರು.
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಕಾಡೆಮಿ ಕೇಂದ್ರದ ಉಪನಿರ್ದೇಶಕ ಕೆಪಿಎಂ ಇಳ್ಯಾಸ್, "ಮಧುಕರ್ ಶೆಟ್ಟಿ ಅವರು ಕೆಲಸದಲ್ಲಿನ ಬದ್ಧತೆ, ದಕ್ಷತೆ ಎಲ್ಲರಿಗೂ ಮಾದರಿಯಾಗಿತ್ತು. ಈ ಮೂಲಕ ಅವರಿಗೆ ಗೌರವ ಸಲ್ಲಿಸಲು ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಕೇಂದ್ರ ಸಭಾಂಗಣಕ್ಕೆ ಮಧುಕರ್ ಶೆಟ್ಟಿ ಅವರ ಹೆಸರನ್ನಿಡಲು ನಿರ್ಧರಿಸಲಾಗಿದೆ" ಎಂದು ತಿಳಿಸಿದ್ದಾರೆ.