ಬೆಂಗಳೂರು, ಮೇ 12 (DaijiworldNews/MB) : ರಾಜ್ಯದಲ್ಲಿ ಮೊದಲನೇ ಡೋಸ್ ಪಡೆದವರಿಗೆಯೇ ಎರಡನೇ ಡೋಸ್ ನೀಡುವಷ್ಟು ಲಸಿಕೆ ಲಭ್ಯವಿಲ್ಲ. ಏತನ್ಮಧ್ಯೆ 18ರಿಂದ 44 ವರ್ಷದವರಿಗೂ ಮೊದಲ ಡೋಸ್ ನೀಡಲು ಆರಂಭಿಸಲಾಗಿದೆ. ಲಸಿಕೆಯೇ ಲಭ್ಯವಿಲ್ಲದಿರುವಾಗ ಅಭಿಯಾನ ಆರಂಭ ಮಾಡಿದ್ದೇಕೆ ಎಂದು ರಾಜ್ಯ ಸರ್ಕಾರದ ವಿರುದ್ದ ಹೈಕೋರ್ಟ್ ಗರಂ ಆಗಿದೆ.
ರಾಜ್ಯದಲ್ಲಿ ಕೊರೊನಾ ಲಸಿಕೆ ಕೊರತೆಯ ವಿಚಾರವಾಗಿ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರನ್ನು ಒಳಗೊಂಡ ವಿಶೇಷ ಪೀಠ, ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ರಾಜ್ಯದಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ 45 ವರ್ಷ ಮೇಲ್ಪಟ್ವ 26 ಲಕ್ಷ ಮಂದಿ ಮೊದಲ ಡೋಸ್ ಪಡೆದು ಎರಡನೇ ಡೋಸ್ಗಾಗಿ ಕಾಯುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಲಸಿಕೆ ಪ್ರಮಾಣ 9.37 ಲಕ್ಷ ಮಾತ್ರ ಇದೆ. ಈ ನಡುವೆ 18ರಿಂದ 44 ವರ್ಷದವರಿಗೂ ಮೊದಲ ಡೋಸ್ ನೀಡಲು ಪ್ರಾರಂಭಿಸಲಾಗಿದೆ. ಲಸಿಕೆ ಇಲ್ಲದೆಯೇ ಯೋಜನೆ ಆರಂಭಿಸಿದ್ದು ಏಕೆ ಪ್ರಶ್ನಿಸಿದೆ.
ಇನ್ನು ಕೊರೊನಾ ಲಸಿಕೆಯ ವಿಚಾರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿರುವ ಹೈಕೋರ್ಟ್, ರಾಜ್ಯ ಸರ್ಕಾರ ಇನ್ನೆರಡು ದಿನದಲ್ಲಿ ರಾಜ್ಯದಲ್ಲಿ ಕೊರೊನಾ ಲಸಿಕೆ ಅಭಿಯಾನದ ಬಗ್ಗೆಗಿನ ರೂಪುರೇಷೆಯನ್ನು ಹೈಕೋರ್ಟ್ಗೆ ನೀಡಬೇಕು. ಹಾಗೆಯೇ ಈ ಹಿಂದೆ ವಿಚಾರಣೆ ವೇಳೆ ನೀಡಿರುವ ನಿರ್ದೇಶನಗಳನ್ನು ಪಾಲಿಸಿರುವ ಕುರಿತು ಅನುಸರಣಾ ವರದಿ ಸಲ್ಲಿಸಬೇಕು ಎಂದು ಆದೇಶಿಸಿದೆ.
ಕೇಂದ್ರ ಸರ್ಕಾರ ನಿಗದಿ ಮಾಡಿರುವ ಮಾನದಂಡಗಳ ಪ್ರಕಾರ 26 ಲಕ್ಷ ಜನರಿಗೆ ಕೂಡಲೇ ಡೋಸ್ ನೀಡಬೇಕಾಗಿದೆ. ಇಲ್ಲವಾದರೆ ಅವಧಿ ಮೀರಬಹುದು. ಇದೇ ಸ್ಥಿತಿ ಮುಂದುವರಿದರೆ ಕೊರೊನಾ ಲಸಿಕೆ ಅಭಿಯಾನವೇ ನಿಷ್ಪ್ರಯೋಜಕವಾಗುತ್ತದೆ ಎಂದು ಕೂಡಾ ಅಭಿಪ್ರಾಯಿಸಿರುವ ಹೈಕೋರ್ಟ್ ಈ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರ ಯಾವ ತಯಾರಿ ಮಾಡಿಕೊಂಡಿದೆ ಎಂದು ಕೇಳಿದೆ.