ನವದೆಹಲಿ, ಮೇ 12 (DaijiworldNews/MS):ಕರೋನವೈರಸ್ಗಾಗಿ ಸ್ವದೇಶಿ ಕೊವಾಕ್ಸಿನ್ ಲಸಿಕೆಯನ್ನು ಅಭಿವೃದ್ಧಿಪಡಿಸಿರುವ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಈಗ ಮಕ್ಕಳ ಮೇಲೆ ಲಸಿಕೆ ಪರೀಕ್ಷಿಸಲು ನಿರ್ಧರಿಸಿದೆ. ಈ ಬಗ್ಗೆ ಅನುಮತಿಗಾಗಿ ಸಂಸ್ಥೆಯೂ ಕೇಂದ್ರೀಯ ಔಷಧ ಗುಣಮಟ್ಟನಿಯಂತ್ರಣಾ ಸಂಸ್ಥೆಗೆ ಅರ್ಜಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ, ತಜ್ಞರ ಸಮಿತಿಯು ಭಾರತ್ ಬಯೋಟೆಕ್ಗೆ ಭೇಟಿ ನೀಡಿ ಪರಿಶೀಲಿಸಿದ್ದು ಶೀಘ್ರದಲ್ಲೇ ತನ್ನ ನಿರ್ಧಾರವನ್ನು ಪ್ರಕಟಿಸಲಿದೆ.
ದೇಶದಲ್ಲಿ ಕೊರೊನಾದ ಮೂರನೇ ತರಂಗದಿಂದ ಮಕ್ಕಳು ಸೋಂಕಿಗೆ ಒಳಗಾಗುವ ಹೆಚ್ಚು ಸಾಧ್ಯತೆಯಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಮಕ್ಕಳಿಗಾಗಿ ವ್ಯಾಕ್ಸಿನೇಷನ್ ಪ್ರಕ್ರಿಯೆಯು ವೇಗಗೊಂಡಿದೆ. ಇತ್ತೀಚೆಗೆ, ಮಕ್ಕಳಿಗೆ ಲಸಿಕೆ ಹಾಕುವಂತೆ ಮತ್ತು ಮೂರನೇ ತರಂಗದಿಂದ ರಕ್ಷಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಕೊವಾಕ್ಸಿನ್ ಲಸಿಕೆ ಅಭಿವೃದ್ಧಿಯ ಸಂದರ್ಭದಲ್ಲಿ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿ ಭಾರತ್ ಬಯೋಟೆಕ್ 12 ರಿಂದ 65 ವರ್ಷದೊಳಗಿನ 380 ಅಭ್ಯರ್ಥಿಗಳ ಮೇಲೆ ಪ್ರಯೋಗ ನಡೆಸಿತ್ತು. ಸಂದರ್ಭ ಲಸಿಕೆ ತುಂಬಾ ಸುರಕ್ಷಿತ ಮತ್ತು ರೋಗನಿರೋಧಕವಾಗಿದೆ ಎಂದು ಕಂಡುಬಂದಿತ್ತು. ಮೂರನೇ ಹಂತದ ಪರೀಕ್ಷೆಯಲ್ಲಿ, ವಯಸ್ಕರಿಗೆ ಮಾತ್ರ ಲಸಿಕೆ ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ, ಸಂಸ್ಥೆ ಈಗ 2 ರಿಂದ 12 ವರ್ಷ ವಯಸ್ಸಿನ ಮಕ್ಕಳ ಮೇಲೆ ವಿಶೇಷ ಕ್ಲಿನಿಕಲ್ ಪ್ರಯೋಗವನ್ನು ನಡೆಸಲು ಯೋಜಿಸಿದೆ. ಈ ಪ್ರಯೋಗ ಯಶಸ್ವಿಯಾದರೆ, 1 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ಭಾರತದಲ್ಲಿ ಲಭ್ಯವಾಗಲಿದೆ. ಯುಎಸ್ ನಲ್ಲಿ 12 ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ಫೈಜರ್ ಲಸಿಕೆ ಅನುಮೋದನೆ ನೀಡಿದ ನಂತರ, ಭಾರತದಲ್ಲಿ ಮಕ್ಕಳಿಗೆ ಲಸಿಕೆ ನೀಡಲು ಸಿದ್ಧತೆ ಆರಂಭಿಸಿದೆ.