ನವದೆಹಲಿ, ಮೇ 11 (DaijiworldNews/MB) : ಇನ್ನೂ 90 ಲಕ್ಷಕ್ಕೂ ಹೆಚ್ಚು ಡೋಸ್ ಕೊರೊನಾ ಲಸಿಕೆಗಳು ಲಭ್ಯವಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮುಂದಿನ ಮೂರು ದಿನಗಳಲ್ಲಿ ಹೆಚ್ಚುವರಿಯಾಗಿ 7 ಲಕ್ಷಕ್ಕೂ ಅಧಿಕ ಡೋಸ್ಗಳನ್ನು ಕಳುಹಿಸುತ್ತೇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಮಾಹಿತಿ ನೀಡಿದೆ.
''ಕೊರೊನಾ ಲಸಿಕೆಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ನೀಡುವ ಮೂಲಕ ಭಾರತ ಸರ್ಕಾರವು ರಾಷ್ಟ್ರವ್ಯಾಪ್ತಿ ಲಸಿಕೆ ಅಭಿಯಾನಕ್ಕೆ ಬೆಂಬಲವನ್ನು ಮುಂದುವರಿಸಿದೆ'' ಎಂದು ಕೇಂದ್ರ ಸರ್ಕಾರ ಹೇಳಿದೆ.
''ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ 18,00,03,160 ಡೋಸ್ ಲಸಿಕೆಯನ್ನು ಈವರೆಗೆ ನೀಡಿದ್ದು ಇದರಲ್ಲಿ, ತ್ಯಾಜ್ಯಗಳು ಸೇರಿದಂತೆ ಒಟ್ಟು 17,09,71,429 ಡೋಸ್ ಲಸಿಕೆ ಬಳಕೆಯಾಗಿದೆ. ಇನ್ನೂ 90 ಲಕ್ಷಕ್ಕೂ ಹೆಚ್ಚು ಡೋಸ್ ಕೊರೊನಾ ಲಸಿಕೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿದೆ'' ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಇನ್ನು ''ಅಧಿಕವಾಗಿ ಮುಂದಿನ ಮೂರು ದಿನಗಳಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೆಚ್ಚುವರಿಯಾಗಿ 7,29,610 ಡೋಸ್ ಲಸಿಕೆ ನೀಡಲಾಗುವುದು'' ಎಂದು ಕೇಂದ್ರ ಸರ್ಕಾರ ಹೇಳಿದೆ.