ಬೆಂಗಳೂರು, ಮೇ 11 (DaijiworldNews/MB) : "ದುಡಿಯುವ ವರ್ಗಕ್ಕೆ 10 ಸಾವಿರ ರೂ. ಪರಿಹಾರ ನೀಡಲು ನಾವೇನು ದುಡ್ಡು ಪ್ರಿಂಟ್ ಮಾಡುತ್ತೇವಾ?" ಎಂದು ಪ್ರಶ್ನಿಸಿದ್ದ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ದ ಕಿಡಿಕಾರಿರುವ ಕಾಂಗ್ರೆಸ್, ''ನೋಟ್ ಎಣಿಸುವ ಮಿಷನ್ ಇರುವಾಗ, ಪ್ರಿಟಿಂಗ್ ಮೆಷಿನ್ ಕೂಡ ಇರಬಹುದು ಮನೆಯಲ್ಲಿ ಒಮ್ಮೆ ಹುಡುಕಿ'' ಎಂದು ಟಾಂಗ್ ನೀಡಿದೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭ ಸಚಿವ ಈಶ್ವರಪ್ಪನವರು, ''10 ಸಾವಿರ ರೂ. ಪರಿಹಾರ ನೀಡೋಕೆ ನಾವೇನು ದುಡ್ಡು ಪ್ರಿಂಟ್ ಮಾಡುತ್ತೇವಾ'' ಎಂದು ಪ್ರಶ್ನಿಸಿದ್ದರು.
ಈ ವಿಚಾರದಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ''ಬಿಜೆಪಿಯ ಸಚಿವರ ನಾಲಿಗೆಯಲ್ಲೇ ಈ ಸರ್ಕಾರದ ಅಯೋಗ್ಯತನ ಬಟಾಬಯಲಾಗುತ್ತಿದೆ. ರೈತರ ಸಾಲಾ ಮನ್ನಾ ಮಾಡಲು, ಲಾಕ್ಡೌನ್ನಿಂದ ನರಳುತ್ತಿರುವ ಬಡವರಿಗೆ ನೆರವು ನೀಡಲು ನೋಟ್ ಪ್ರಿಂಟಿಂಗ್ ಮೆಷಿನ್ ಇಲ್ಲ ಎನ್ನುವ ಈಶ್ವರಪ್ಪ ಅವರೇ, ನಿಮ್ಮಲ್ಲಿ ನೋಟ್ ಎಣಿಸುವ ಮಿಷನ್ ಇದ್ದಮೇಲೆ ಪ್ರಿಟಿಂಗ್ ಮೆಷಿನ್ ಕೂಡ ಇರಬಹುದು ಒಮ್ಮೆ ಮನೆಯಲ್ಲಿ ಹುಡುಕಿ'' ಎಂದು ಹೇಳಿದ್ದಾರೆ.
ಇನ್ನು ಕೊರೊನಾ ವಾರಿಯರ್ಸ್ಗಳಾದ ಆಂಬುಲೆನ್ಸ್ ಸಿಬ್ಬಂದಿಗಳಿಗೆ ಸಂಬಳ ದೊರೆತಿಲ್ಲ ಎಂಬ ವರದಿಯೊಂದನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ''ಭತ್ತದ ಬೆಂಬಲ ಬೆಲೆ ಕೇಳಿದ್ರೆ ದುಡ್ಡಿಲ್ಲ, ಸಾರಿಗೆ ನೌಕರರು ಸಂಬಳ ಕೇಳಿದ್ರೆ ದುಡ್ಡಿಲ್ಲ, ಲಾಕ್ಡೌನ್ ಪರಿಹಾರ ಕೇಳಿದ್ರೆ ದುಡ್ಡಿಲ್ಲ ಎನ್ನುವ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ಸಂಬಳ ಕೊಟ್ಟಿಲ್ಲ, 108 ಆಂಬ್ಯುಲೆನ್ಸ್ ಸಿಬ್ಬಂದಿಗೆ ಸಂಬಳ ನೀಡಿಲ್ಲ. ಕೋವಿಡ್ ವಾರಿಯರ್ಸ್ಗೆ ಚಪ್ಪಾಳೆ, ದೀಪ ಮಾತ್ರನಾ ಬಿ ಎಸ್ ಯಡಿಯೂರಪ್ಪ ಅವರೇ!?'' ಎಂದು ಪ್ರಶ್ನಿಸಿದ್ದು ''ಕೂಡಲೇ ಸಂಬಳ ನೀಡಿ'' ಎಂದು ಆಗ್ರಹಿಸಿದೆ.