ಚಿನ್ಸುರಾಹ್, ಮೇ.11 (DaijiworldNews/PY): ಟಿಎಂಸಿ ಮುಖಂಡ ಆದಿತ್ಯ ನಿಯೋಗಿ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಆದಿತ್ಯ ನಿಯೋಗಿ ಅವರು ಹಣ್ಣು-ತರಕಾರಿ ಖರೀದಿ ಮಾಡುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಗಂಭೀರ ಸ್ಥಿತಿಯಲ್ಲಿದ್ದ ಆದಿತ್ಯ ನಿಯೋಗಿ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ವೈದ್ಯರು ಅವರನ್ನು ಕೋಲ್ಕತ್ತಾ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ.
ಈ ದಾಳಿಯನ್ನು ಬಿಜೆಪಿ ಕಾರ್ಯಕರ್ತರೇ ನಡೆಸಿದ್ದಾರೆ ಎಂದು ಮಾಜಿ ಸಚಿವ ಹಾಗೂ ಟಿಎಂಸಿ ಶಾಸಕ ತಪನ್ ದಾಸ್ ಗುಪ್ತ ಆರೋಪಿಸಿದ್ದರೆ, ಆಡಳಿತ ಪಕ್ಷದೊಳಗಿನ ಗುಂಪುಗಾರಿಕೆ ದ್ವೇಷ ಎಂದು ಬಿಜೆಪಿ ತಿಳಿಸಿದೆ.
ಘಟನೆಯ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸುತ್ತೇವೆ ಎಂದು ಹೇಳಿದ್ದಾರೆ.