ಟಿನ್ಸುಕಿಯಾ, ಮೇ 11(DaijiworldNews/MS): ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಗ್ರೆನೇಡ್ ಸ್ಫೋಟದಲ್ಲಿ 12 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಮೃತನನ್ನು ಬಾಲಕ ಸೂಜೋಯ್ ಹಜೊಂಗ್ ಎಂದು ಗುರುತಿಸಲಾಗಿದೆ.
ಬಾಲಕ ಸೈಕಲ್ ಸವಾರಿ ಮಾಡುತ್ತಿರುವಾಗ ರಸ್ತೆ ಬದಿಯಲ್ಲಿ ಇರಿಸಲಾಗಿದ್ದ ವಸ್ತುವೊಂದನ್ನು ಕುತೂಹಲದಿಂದ ಕೈಗೆತ್ತಿಕೊಂಡಿದ್ದು , ಆದರೆ ಅದು ಗ್ರೆನೇಡ್ ಆಗಿದ್ದು ಸ್ಪೋಟವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.
ಸ್ಪೋಟದ ರಭಸಕ್ಕೆ ಬಾಲಕನಿಗೆ ತೀವ್ರ ಗಾಯಗಳಾಗಿದ್ದು ಮಾರ್ಗರಿಟಾದ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬಾಲಕ ಅದಾಗಲೇ ಮೃತಪಟ್ಟಿದ್ದ. ಘಟನೆ ಟಿನ್ಸುಕಿಯಾ ಎಸ್ಪಿ ವೈಭವ್ ನಿಂಬಲ್ಕರ್ ಸ್ಥಳಕ್ಕೆ ಧಾವಿಸಿದ್ದು" ಸ್ಫೋಟದ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ , ಗ್ರೆನೇಡ್ ಅನ್ನು ರಸ್ತೆಬದಿಯಲ್ಲಿ ಯಾರು ಇರಿಸಿದ್ದಾರೆಂದು ಸದ್ಯ ತಿಳಿದು ಬಂದಿಲ್ಲ ತನಿಖೆ ಕೈಗೆತ್ತಿಕೊಂಡಿದ್ದೇವೆ. ಆದಾಗ್ಯೂ, ಉಲ್ಫಾ-ಐ ಸಂಘಟನೆಯ ಕೈವಾಡವನ್ನು ತಳ್ಳಿಹಾಕುವಂತಿಲ್ಲ ಎಂದು ಹೇಳಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಕಾನೂನುಬಾಹಿರ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್-ಇಂಡಿಪೆಂಡೆಂಟ್ (ಉಲ್ಫಾ-ಐ) ಗೆ ಮಾತುಕತೆಗೆ ಮುಂದೆ ಬರಬೇಕೆಂದು ಮನವಿ ಮಾಡಿದ 24 ಗಂಟೆಗಳ ಒಳಗೆ ಈ ಘಟನೆ ನಡೆದಿದೆ.