ನವದೆಹಲಿ, ಮೇ.11 (DaijiworldNews/PY): "ಕಾಂಗ್ರೆಸ್ ಕೊರೊನಾ ವಿರುದ್ದದ ಹೋರಾಟದ ವಿಚಾರದಲ್ಲಿ ಜನರ ದಾರಿ ತಪ್ಪಿಸುತ್ತಿದೆ" ಎಂದು ಆರೋಪಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ನಾಲ್ಕು ಪುಟಗಳ ಪತ್ರ ಬರೆದಿದ್ದಾರೆ.
ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ, "ಕೊರೊನಾ ಎರಡನೇ ಅಲೆ ಗಂಭಿರವಾದ ವಿಪತ್ತು ಆಗಿದ್ದು, ಇದಕ್ಕೆ ಪಿಎಂ ಮೋದಿ ಸರ್ಕಾರದ ಉದಾಸೀನತೆ, ಅಸೂಕ್ಷ್ಮತೆ ಮತ್ತು ಅಸಮರ್ಥತೆಯೇ ನೇರ ಕಾರಣ. ಕೇಂದ್ರ ಸರ್ಕಾರ ತನ್ನ ವೈಯಕ್ತಿಕ ಕಾರ್ಯಸೂಚಿಯನ್ನು ಬದಿಗಿಟ್ಟು, ಜನರ ನೋವಿಗೆ ಕಿವಿಯಾಗಬೇಕು" ಎಂದು ಸೋನಿಯಾ ಸೇರಿದಂತೆ ವಿವಿಧ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದರು
ಈ ಅಂಶಗಳನ್ನು ಉಲ್ಲೇಖಿಸಿ ಪತ್ರ ಬರೆದಿರುವ ನಡ್ಡಾ ಅವರು, "ಶತಮಾನದಲ್ಲೊಮ್ಮೆ ಕಾಣಿಸಿಕೊಳ್ಳುವ ಸಾಂಕ್ರಾಮಿಕ ರೋಗದ ಸಂದರ್ಭ ಲಸಿಕೆಯ ಬಗ್ಗೆ ಕಾಂಗ್ರೆಸ್ನ ಮುಖ್ಯಮಂತ್ರಿ ಹಾಗೂ ಇತರೆ ನಾಯಕರು ಜನರಲ್ಲಿ ಹಿಂಜರಿಕೆ ಸ್ವಭಾವವನ್ನು ಹುಟ್ಟುಹಾಕುತ್ತಿದ್ದಾರೆ. ಕಾಂಗ್ರೆಸ್ ಕೊರೊನಾ ವಿರುದ್ದದ ಹೋರಾಟದ ವಿಚಾರದಲ್ಲಿ ಜನರ ದಾರಿ ತಪ್ಪಿಸುತ್ತಿದೆ" ಎಂದು ಕಿಡಿಕಾರಿದ್ದಾರೆ.
"ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ನ ನಡೆಯಿಂದ ಬೇಸರವುಂಟಾಗಿದೆ. ಆದರೆ, ಈ ಬಗ್ಗೆ ಆಶ್ಚರ್ಯವಾಗಿಲ್ಲ" ಎಂದಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೊರೊನಾ ವಿರುದ್ದ ಹೋರಾಟ ನಡೆಯುತ್ತಿದೆ. ಈ ಹೋರಾಟವು, ಕೊರೊನಾ ವಾರಿಯರ್ಗಳ ಮೇಲಿನ ನಂಬಿಕೆ, ವಿಜ್ಞಾನದಲ್ಲಿ ಅಚಲವಾದ ನಂಬಿಕೆ, ನೂತನ ಸಂಶೋಧನೆಗಳಿಗೆ ಬೆಂಬಲ ಈ ಎಲ್ಲಾ ತತ್ವದೊಂದಿಗೆ ಮುಂದುವರಿದಿದೆ' ಎಂದು ಪತ್ರದಲ್ಲಿ ಬರೆದಿದ್ದಾರೆ.