ನವದೆಹಲಿ, ಮೇ.11 (DaijiworldNews/PY): ಕೊರೊನಾ ಸೋಂಕಿನಿಂದ ಭಾರತೀಯ ರೈಲ್ವೆ ಇಲಾಖೆಯು 1,952 ಉದ್ಯೋಗಿಗಳನ್ನು ಕಳೆದುಕೊಂಡಿದೆ. ದೇಶದ ಅತೀ ದೊಡ್ಡ ಸಾರಿಗೆ ವ್ಯವಸ್ಥೆಯಾಗಿರುವ ರೈಲು ಸಂಚಾರ ವ್ಯವಸ್ಥೆಯಲ್ಲಿ ಪ್ರತೀ ದಿನ ಒಂದು ಸಾವಿರ ಕೊರೊನಾ ಸೋಂಕು ಪ್ರಕರಗಳು ವರದಿಯಾಗುತ್ತಿವೆ ಎಂದು ರೈಲ್ವೆ ಮಂಡಳಿ ತಿಳಿಸಿದೆ.
ಪ್ರಾತಿನಿಧಿಕ ಚಿತ್ರ
ಈ ಬಗ್ಗೆ ರೈಲ್ವೆ ಮಂಡಳಿ ಅಧ್ಯಕ್ಷ ಸುನೀತ್ ಶರ್ಮಾ ಮಾಹಿತಿ ನೀಡಿದ್ದು, "ರೈಲ್ವೆ ಇಲಾಖೆ ಕೂಡಾ ಯಾವುದೇ ರಜ್ಯ ಅಥವಾ ಪ್ರದೇಶಕ್ಕಿಂತ ಭಿನ್ನವಾಗಿಲ್ಲ. ಏಕೆಂದರೆ, ನಾವು ಸಹ ಕೊರೊನಾ ಸೋಂಕಿಗೆ ಒಳಗಾಗುತ್ತೇವೆ. ನಮ್ಮದು ವಾಣಿಜ್ಯ ಉದ್ದೇಶದ ಸಾರಿಗೆ ವ್ಯವಸ್ಥೆಯಾದ ಕಾರಣ, ಸರಕು ಹಾಗೂ ಜನರನ್ನು ಸಾಗಿಸುತ್ತೇವೆ. ಹೀಗಾಗಿ ಪ್ರತೀ ದಿನ 1,000 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ" ಎಂದಿದ್ದಾರೆ.
"ರೈಲ್ವೆ ಇಡೀ ಜಗತ್ತಿನಲ್ಲಿಯೇ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಇಲಾಖೆಯಾಗಿದ್ದು, ಅಂದಾಜು 13 ಲಕ್ಷ ಉದ್ಯೋಗಿಗಳು ಇರುವುದಾಗಿ ಹೇಳಿದೆ. ನಮ್ಮಲ್ಲಿ ಆಸ್ಪತ್ರೆಗಳಿವೆ. ಅಲ್ಲದೇ, ಬೆಡ್ ಸಂಖ್ಯೆಯನ್ನು ಕೂಡಾ ಹೆಚ್ಚಿಸುತ್ತಿದ್ದೇವೆ. ರೈಲ್ವೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ಅನ್ನು ಕೂಡಾ ಸಿದ್ದ ಮಾಡುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
"ಈ ಹಿನ್ನೆಲೆ ನಮ್ಮ ಸಿಬ್ಬಂದಿಗಳ ಸುರಕ್ಷತೆಗೆ ನಾವು ಆದ್ಯತೆ ನೀಡುತ್ತೇವೆ. ಹೀಗಿದ್ದರೂ ಕೂಡಾ ಕಳೆದ ಮಾರ್ಚ್ ತಿಂಗಳಿನಿಂದ ಇಲ್ಲಿಯವರೆಗೆ 1,952 ಉದ್ಯೋಗಿಗಳು ಕೊರೊನಾಕ್ಕೆ ಬಲಿಯಾಗಿದ್ದಾರೆ" ಎಂದಿದ್ದಾರೆ.