ನವದೆಹಲಿ, ಮೇ 11 (DaijiworldNews/MB) : ''ದೇಶದಲ್ಲಿ ಲಸಿಕೆ ಉತ್ಪಾದನೆ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಳ ಮಾಡುವುದು ತೀರಾ ಅವಶ್ಯವಾಗಿದೆ, ಕೇಂದ್ರ ಸರ್ಕಾರ ಈ ಬಗ್ಗೆ ಗಮನಹರಿಸಬೇಕು'' ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಅವರು, ''ಕೇವಲ 2 ಕಂಪನಿಗಳು ಲಸಿಕೆಗಳನ್ನು ಉತ್ಪಾದಿಸುತ್ತಿವೆ. ಅವರು ತಿಂಗಳಿಗೆ 6-7 ಕೋಟಿ ಲಸಿಕೆಗಳನ್ನು ಮಾತ್ರ ಉತ್ಪಾದಿಸುತ್ತಾರೆ. ಈ ರೀತಿಯಾದರೆ ಎಲ್ಲರಿಗೂ ಲಸಿಕೆ ಹಾಕಲು 2 ವರ್ಷಗಳು ಬೇಕಾಗುತ್ತದೆ. ಕೊರೊನಾದ ಮತ್ತೊಂದು ಅಲೆ ಬರುವುದಕ್ಕೂ ಮುನ್ನ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಿ ಎಲ್ಲರಿಗೂ ಲಸಿಕೆ ಹಾಕುವ ರಾಷ್ಟ್ರೀಯ ಯೋಜನೆ ಕೈಗೊಳ್ಳಬೇಕಿದೆ'' ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಇನ್ನು ''ದೆಹಲಿಯಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿವೆ. ಜನರ ಸಹಕಾರದೊಂದಿಗೆ ಲಾಕ್ಡೌನ್ ಯಶಸ್ವಿಯಾಗಿದೆ. ನಾವು ಕಳೆದ ಕೆಲವು ದಿನಗಳಲ್ಲಿ ಆಕ್ಸಿಜನ್ ಬೆಡ್ಗಳ ಸಂಖ್ಯೆಯನ್ನು ಹೆಚ್ಚಿಸಿದ್ದೇವೆ. ನಿನ್ನೆಯಷ್ಟೇ ಹೊಸದಾಗಿ 500 ಹೊಸ ಐಸಿಯು ಬೆಡ್ಗಳನ್ನು ಪ್ರಾರಂಭಿಸಿದ್ದೇವೆ. ಈಗ ದೆಹಲಿಯಲ್ಲಿ ಐಸಿಯು ಮತ್ತು ಆಕ್ಸಿಜನ್ ಬೆಡ್ಗಳ ಕೊರತೆಯಿಲ್ಲ'' ಎಂದು ತಿಳಿಸಿದ್ದಾರೆ.
''ಇದೀಗ, ನಾವು ಪ್ರತಿದಿನ 1.25 ಲಕ್ಷ ಡೋಸ್ ಲಸಿಕೆ ನೀಡುತ್ತಿದ್ದೇವೆ. ನಾವು ಶೀಘ್ರದಲ್ಲೇ ಪ್ರತಿದಿನ 3 ಲಕ್ಷ ಜನರಿಗೆ ಲಸಿಕೆ ಹಾಕಲು ಪ್ರಾರಂಭಿಸುತ್ತೇವೆ. ಮುಂದಿನ 3 ತಿಂಗಳಲ್ಲಿ ದೆಹಲಿಯ ಎಲ್ಲಾ ನಿವಾಸಿಗಳಿಗೆ ಲಸಿಕೆ ನೀಡುವ ಗುರಿ ಹೊಂದಿದ್ದೇವೆ. ಆದರೆ ನಾವು ಲಸಿಕೆ ಕೊರತೆಯನ್ನು ಎದುರಿಸುತ್ತಿದ್ದೇವೆ. ನಮ್ಮಲ್ಲಿ ಸ್ಟಾಕ್ ಇದೆ. ಆದರೆ ಅದು ಕೆಲವೇ ದಿನಗಳವರೆಗೆ ಮಾತ್ರ ಬರಲಿದೆ'' ಎಂದು ಕೂಡಾ ಹೇಳಿದ್ದಾರೆ.