ಮುಂಬೈ, ಮೇ.11 (DaijiworldNews/HR): ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿ ಬಂದಿದ್ದು, ಜಾರಿ ನಿರ್ದೇಶನಾಲಯ(ಇಡಿ) ಕೇಸು ದಾಖಲಿಸಿದೆ ಎಂದು ತಿಳಿದು ಬಂದಿದೆ.
ಸಿಬಿಐ ಸಲ್ಲಿಸಿದ ಎಫ್ಐಆರ್ ಆಧಾರದ ಮೇಲೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ಹೇಳಿದೆ.
ಇನ್ನು ಮಾಜಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ಮತ್ತು ಅಪರಿಚಿತ ಇತರರು ತಮ್ಮ ಅಧಿಕೃತ ಸ್ಥಾನವನ್ನು ಅನಗತ್ಯ ಲಾಭ ಪಡೆಯಲು ಬಳಸಿಕೊಂಡಿದ್ದಾರೆ ಎಂದು ಸಿಬಿಐ ಹೇಳಿದ್ದು, ಇದರ ಜೊತೆಗೆ ಮುಂಬೈ ಪೊಲೀಸರ ವರ್ಗಾವಣೆ ಮತ್ತು ನೇಮಕಾತಿ ಮೇಲೆ ಪ್ರಭಾವ ಬೀರಿದೆ ಎಂದು ಮಾಜಿ ನಗರ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಆರೋಪಿಸಿದ್ದಾರೆ.
ಅನಿಲ್ ಅವರು ಗೃಹ ಸಚಿವರಾಗಿದ್ದಾಗ ಆಗಿನ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಸಚಿನ್ ವಾಜೆ ಅವರನ್ನು ಮುಂಬೈನ ಹೋಟೆಲ್, ಬಾರ್ಗಳು ಮತ್ತು ರೆಸ್ಟೋರೆಂಟ್ಗಳಿಂದ ಪ್ರತಿ ತಿಂಗಳು 100 ಕೋಟಿ ಸಂಗ್ರಹಿಸುವಂತೆ ಕೇಳಿಕೊಂಡಿದ್ದಾರೆ ಎಂದು ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಆರೋಪಿಸಿದ್ದು, ಆ ಬಳಿಕ ಅಮಾನತುಗೊಂಡ ವಾಜೆ ಫೆಬ್ರವರಿ 25 ರಂದು ಮುಕೇಶ್ ಅಂಬಾನಿ ಮನೆ ಮುಂದೆ ಕಾರಿನಲ್ಲಿ ಸ್ಫೋಟಕ ಇರಿಸಿದ ಪ್ರಕರಣದಲ್ಲಿ ಹಾಗೂ ಮಾರ್ಚ್ 5 ರಂದು ಉದ್ಯಮಿ ಮನ್ಸುಖ್ ಹಿರಾನ್ ಅವರ ಹತ್ಯೆಯ ಆರೋಪದಲ್ಲಿ ಜೈಲಿನಲ್ಲಿದ್ದಾರೆ.