ನವದೆಹಲಿ, ಮೇ 11 (DaijiworldNews/MB) : ಆರೋಗ್ಯ ಸೇತು ಮತ್ತು ಕೋವಿನ್ ಆಪ್ಗಳನ್ನು ಬಳಕೆಗೆ ಆದ್ಯತೆ ನೀಡುವ ಕೇಂದ್ರ ಸರ್ಕಾರದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ''ಈ ಅನರ್ಹ ಸೇತು, ನೋ-ವಿನ್ ಆ್ಯಪ್ಗಳು ಜನರ ಜೀವ ಉಳಿಸಲ್ಲ, ಲಸಿಕೆ ನಮ್ಮನ್ನು ಉಳಿಸುತ್ತದೆ'' ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಅಪ್ಲಿಕೇಶನ್ ಅವಲಂಬಿತ ಮೋದಿ ಸರ್ಕಾರಕ್ಕೆ ಸಂದೇಶ. ದುರದೃಷ್ಟವಶಾತ್ ಇಂಟರ್ನೆಟ್ ಸೌಲಭ್ಯವಿಲ್ಲದವರಿಗೂ ಕೊರೊನಾ ಬರುತ್ತಿದೆ. ಅಂದರೆ ದೇಶದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆಗೆ. ಹೀಗಿರುವಾಗ ಈ ಅನರ್ಹ ಸೇತು, ಕೋವಿನ್ ಆಪ್ಗಳು ಜೀವ ಉಳಿಸದು, ಎರಡು ಡೋಸ್ ಲಸಿಕೆ ಜೀವ ಉಳಿಸುತ್ತದೆ'' ಎಂದು ಹೇಳಿದ್ದಾರೆ.
ಕೊರೊನಾ ತೀವ್ರವಾಗಿ ಹರಡುತ್ತಿರುವ ನಡುವೆಯೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಸೇರಿದೆ. ''ಕೊರೊನಾ ಎರಡನೇ ಅಲೆ ಗಂಭಿರವಾದ ವಿಪತ್ತು ಆಗಿದ್ದು, ಇದಕ್ಕೆ ಪಿಎಂ ಮೋದಿ ಸರ್ಕಾರದ ಉದಾಸೀನತೆ, ಅಸೂಕ್ಷ್ಮತೆ ಮತ್ತು ಅಸಮರ್ಥತೆಯೇ ನೇರ ಕಾರಣ. ವಿಪಕ್ಷಗಳು ನೀಡಿದ ವೈಜ್ಞಾನಿಕ ಸಲಹೆಯನ್ನು ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಕಡೆಗಣಿಸಿದ ನೇರ ಪರಿಣಾಮ ಇದಾಗಿದೆ'' ಎಂದು ಕಾಂಗ್ರೆಸ್ ದೂರಿದೆ.
ಇನ್ನು ಮೋದಿ ಸರ್ಕಾರದ ಲಸಿಕೆ ತಂತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ''ಲಸಿಕೆ ಸರಬರಾಜು ಸಾಕಷ್ಟಿಲ್ಲ, ಆದರೂ ಸರ್ಕಾರ ಇದನ್ನು ಒಪ್ಪಲು ಸಿದ್ದವಿಲ್ಲ. ಲಸಿಕೆ ವಿಚಾರದಲ್ಲೂ ಅಪಾರದರ್ಶಕ ಮತ್ತು ತಾರತಮ್ಯ ಎದ್ದು ಕಾಣುತ್ತದೆ. ಕೇಂದ್ರ ಸರ್ಕಾರ ಈಗಾಗಲೇ 18-44 ವರ್ಷದವರಿಗೆ ಲಸಿಕೆ ಹಾಕುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರಕ್ಕೆ ನೀಡಿದೆ. ಲಸಿಕೆ ಕೊರತೆಯು ಈಗ ದೊಡ್ಡ ಸಮಸ್ಯೆಯಾಗಿದೆ. ಸೋಂಕಿತರ ಸಾವಿನ ಮಾಹಿತಿಯೂ ತಪ್ಪಾಗಿದೆ'' ಎಂದು ಆರೋಪಿಸಿದೆ.