ಬೆಂಗಳೂರು, ಮೇ.11 (DaijiworldNews/PY): "ಕರ್ನಾಟಕ ದೇಶದಲ್ಲಿಯೇ ನಂ.1 ಕೋವಿಡ್ ಪ್ರಕರಣದಲ್ಲಿ, ಎಲ್ಲಾ ರಾಜ್ಯಗಳನ್ನು ಹಿಂದಿಕ್ಕಿ ಅಗ್ರಸ್ಥಾನ ತಲುಪುವುದರಲ್ಲಿ ಬಿಜೆಪಿ ಸರ್ಕಾರದ ಸಾಧನೆ ಬಲು ದೊಡ್ಡದು" ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಕರ್ನಾಟಕ ದೇಶದಲ್ಲಿಯೇ ನಂ.1 ಕೋವಿಡ್ ಪ್ರಕರಣದಲ್ಲಿ, ಎಲ್ಲಾ ರಾಜ್ಯಗಳನ್ನು ಹಿಂದಿಕ್ಕಿ ಅಗ್ರಸ್ಥಾನ ತಲುಪುವುದರಲ್ಲಿ ಬಿಜೆಪಿ ಸರ್ಕಾರದ ಸಾಧನೆ ಬಲು ದೊಡ್ಡದು. ಈ ನಡುವೆ ಟೆಸ್ಟಿಂಗ್ ಪ್ರಮಾಣ ಕಡಿಮೆ ಮಾಡಿ, ಸಾವುಗಳ ಲೆಕ್ಕ ಮರೆಮಾಚಿ ಮರ್ಯಾದೆ ಉಳಿಸಿಕೊಳ್ಳು ಯತ್ನಿಸಲಾಗುತ್ತಿದೆ. ಜೀವಕ್ಕಿಂತ ಸರ್ಕಾರದ ಹೆಸರು ಉಳಿಸುವುದೇ ಇವರ ಆದ್ಯತೆ ಆಗಿದೆ" ಎಂದಿದೆ.
"ಇದು ರಾಜ್ಯ ಸರ್ಕಾರದ ಅಸಾಮರ್ಥ್ಯವೋ, ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯೋ ಸಚಿವ ಸುಧಾಕರ್ ಸ್ಪಷ್ಟಪಡಿಸಬೇಕು. ಕೇಂದ್ರ ನೀಡಿದ ಪಟ್ಟಿಯಲ್ಲಿ ಕರ್ನಾಟಕದ ಹೆಸರು ಏಕಿಲ್ಲ? ವ್ಯಾಕ್ಸಿನ್ಗಾಗಿ ಸರ್ಕಾರ ಬೇಡಿಕೆಯನ್ನೇ ಇಟ್ಟಿಲ್ಲವೇ? ಇಟ್ಟಿದ್ದರೆ ಕೇಂದ್ರ ವಂಚಿಸಿದೆಯೇ?.ವ್ಯವಸ್ಥೆ ಸರಿಪಡಿಸುವ ಎಳೆ ಸಂಸದನೂ ಸೇರಿ 25 ಸಂಸದರು ಎಲ್ಲಿ ಅಡಗಿದ್ದಾರೆ?" ಎಂದು ಪ್ರಶ್ನಿಸಿದೆ.
"ರಾಜ್ಯದಲ್ಲಿ ಕೋವಿಡ್ ನಿರ್ವಹಣೆಯಲ್ಲಿನ ವೈಫಲ್ಯ, ಬಿಜೆಪಿ ಸರ್ಕಾರದ ನಿರ್ಲಕ್ಷ್ಯ, ದುರಾಡಳಿತಕ್ಕೆ ಸಾಕ್ಷಿಯಾಗಿದೆ. 19,372 ಒಟ್ಟು ಸಾವು, 596 ಒಂದು ದಿನದಲ್ಲಿ ಸಾವು, 5,71,006 ಅತಿಹೆಚ್ಚು ಸಕ್ರಿಯ ಪ್ರಕರಣ. ಇದೆಲ್ಲದರ ಮಧ್ಯೆ, ಜನರು ರೋಗಿಗಳ ಪೊಲೀಸರ ದಬ್ಬಾಳಿಕೆ, 18-44 ವಯೋಮಾನದವರಿಗೆ ಲಸಿಕೆ ಕೊರತೆ ಸ್ಥಿತಿ ನಿರ್ಮಾಣವಾಗಿದೆ" ಎಂದು ಹೇಳಿದೆ.