ಶಿವಮೊಗ್ಗ, ಮೇ.11 (DaijiworldNews/HR): "ಕರ್ನಾಟಕದಲ್ಲಿ ಲಾಕ್ಡೌನ್ ಪೂರ್ಣವಾಗಬೇಕಾದರೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು 14 ದಿನ ತಮ್ಮ ಬಾಯಿಗೆ ಲಾಕ್ಡೌನ್ ಮಾಡಿಕೊಳ್ಳಬೇಕು" ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದ ಈ ಮೂರು ವಿಪಕ್ಷ ನಾಯಕರು 14 ದಿನ ಬಾಯಿಗೆ ಬೀಗ ಹಾಕಿಕೊಂಡಲ್ಲಿ ಕರ್ನಾಟಕದ ಲಾಕ್ಡೌನ್ ಯಶಸ್ವಿಯಾಗುತ್ತದೆ" ಎಂದರು.
ಪ್ರಸ್ತುತ ಸಂದರ್ಭ ಸರಿಯಿಲ್ಲ, ಹಾಗಾಗಿ ಸಂಕಷ್ಟದಿಂದ ಹೊರಬಂದ ಬಳಿಕ ಯಾವ ಭಾಷೆಯಲ್ಲಿ ಬೇಕಾದಾರೂ ಮಾತನಾಡಿಕೊಳ್ಳೋಣ. ಸದ್ಯಕ್ಕೆ ಇವರೆಲ್ಲರೂ ತಮ್ಮ ಬಾಯಿಗೆ ಬೀಗ ಹಾಕಿಕೊಳ್ಳುವುದು ಉತ್ತಮ" ಎಂದಿದ್ದಾರೆ.
ಸಂಕಷ್ಟ ಸಂದರ್ಭದಲ್ಲಿ ವೈದ್ಯಕೀಯ ಸಲಕರಣೆಗಳ ಖರೀದಿಗೆ ಕರ್ನಾಟಕ ಸರ್ಕಾರವು 224 ಶಾಸಕರಿಗೆ ತಲಾ ರೂ.1 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದ್ದು, ಬಿಡುಗಡೆಯಾದ ಅನುದಾನವನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕೆಂದು ಜಿಲ್ಲೆಯ ಎಲ್ಲಾ ಶಾಸಕರು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ" ಎಂದು ಹೇಳಿದ್ದಾರೆ.
ಇನ್ನು "ಶಿವಮೊಗ್ಗದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೇ 13ರಿಂದ ಮೇ 16 ರವೆಗೆ ಶಿವಮೊಗ್ಗ ನಗರಕ್ಕೆ ಸೀಮಿತವಾಗಿ ಲಾಕ್ಡೌನ್ ಮಾಡಲಾಗುತ್ತಿದ್ದು, ಸ್ಥಳೀಯ ಏರಿಯಾವನ್ನು ಬಿಟ್ಟು ಯಾರು ಹೊರಬರುವಂತಿಲ್ಲ . ದಿನಸಿ ಸೇರಿದಂತೆ ಏನೇ ಅಗತ್ಯ ವಸ್ತು ಬೇಕಾದರೂ ನಾಳೆಯೇ ಖರೀದಿ ಮಾಡಿಟ್ಟುಕೊಳ್ಳಿ" ಎಂದು ಸೂಚಿಸಿದ್ದಾರೆ.