ನವದೆಹಲಿ, ಮೇ 11 (DaijiworldNews/MB) : ಕೊರೊನಾ ನಿವಾರಣೆ ಮಾಡಲು ಗೋವಿನ ಸಗಣಿಯಿಂದ ಸಾಧ್ಯ ಎಂದು ಹೇಳಿಕೊಂಡು ಗೋವಿನ ಸಗಣಿ ಹಾಗೂ ಮೂತ್ರವನ್ನು ಲೇಪಿಸಿ ಚಿಕಿತ್ಸೆ ನೀಡಲಾಗುತ್ತಿರುವುದನ್ನು ತೀವ್ರವಾಗಿ ಖಂಡಿಸಿರುವ ಭಾರತದ ವೈದ್ಯರು ಈ ಅಭ್ಯಾಸದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ಗುಣಪಡಿಸಲು ಸಗಣಿ ಬಳಕೆ ಉಪಯೋಗಕಾರಿ ಎಂಬ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಇದರಿಂದಾಗಿ ಇತರ ರೋಗಗಳು ಹರಡುವ ಸಾಧ್ಯತೆ ಅಧಿಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಗುಜರಾತ್ ರಾಜ್ಯದಲ್ಲಿ ಕೆಲವರು ಗೋಶಾಲೆಗೆ ಹೋಗಿ ಮೈತುಂಬಾ ಗೋವಿನ ಸಗಣಿ ಹಾಗೂ ಮೂತ್ರವನ್ನು ಲೇಪಿಸಿಕೊಳ್ಳುತ್ತಿದ್ದು, ಇದರಿಂದಾಗಿ ರೋಗನಿರೋಧಕ ಶಕ್ತಿ ಅಧಿಕವಾಗುತ್ತದೆ. ಕೊರೊನಾ ಸೋಂಕಿತರು ಸೋಂಕಿನಿಂದ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ನಂಬಿಕೆಯಿರಿಸಿದ್ದಾರೆ.
ಈ ವಿಚಾರದಲ್ಲಿ ಎಚ್ಚರಿಕೆ ನೀಡಿದ ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಜೆ.ಎ.ಜಯಲಾಲ್, ''ಕೊರೊನಾ ವಿರುದ್ದ ರೋಗನಿರೋಧಕ ಶಕ್ತಿ ವೃದ್ಧಿಗೆ ಗೋವಿನ ಮೂತ್ರ ಅಥವಾ ಸೆಗಣಿ ಉಪಯುಕ್ತ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷಿಗಳಿಲ್ಲ. ಇದು ನಂಬಿಕೆಯನ್ನು ಆಧಾರಿಸಿದೆ. ಗೋ ಮೂತ್ರ, ಸೆಗಣಿ ಉತ್ಪನ್ನಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಅಪಾಯ ಉಂಟಾಗುವ ಸಾಧ್ಯತೆಯೂ ಅಧಿಕವಾಗಿದೆ. ಪ್ರಾಣಿಗಳಿಗೆ ಇರುವ ರೋಗಗಳು ಮನುಷ್ಯರಿಗೆ ಹರಡಬಹುದು'' ಎಂದು ತಿಳಿಸಿದ್ದಾರೆ.
''ಸಗಣಿಯಿಂದ ಬಳಕೆಯ ಅಭ್ಯಾ ವೈರಸ್ ಹರಡಬಹುದು. ಸಗಣಿ ಬಳಸಲೆಂದು ಹಲವಾರು ಜನರು ಅಲ್ಲಿ ಗುಂಪು ಗುಂಪಾಗಿ ಸೇರುತ್ತಿದ್ದಾರೆ. ಇದರಿಂದಾಗಿ ಕೊರೊನಾ ಸೋಂಕು ಅಥವಾ ಯಾವುದೇ ಇತರೆ ಸೋಂಕು ಹರಡುವ ಸಾಧ್ಯೆತೆ ಅಧಿಕವಾಗಿದೆ'' ಎಂದು ಹೇಳಿದ್ದಾರೆ.
ಇನ್ನು ''ಇದರಲ್ಲಿ ಭಾಗಿಯಾಗುವವರ ಸಂಖ್ಯೆಯನ್ನು ಅಹಮದಾಬಾದ್ನ ಗೋಶಾಲೆಯ ಉಸ್ತುವಾರಿ ಮಧುಚರಣ್ ದಾಸ್ ಅವರು ಸೀಮಿತಗೊಳಿಸುತ್ತಿದ್ದಾರೆ'' ಎಂದು ಕೂಡಾ ಅವರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಔಷಧೀಯ ಕಂಪನಿಯ ಸಹಾಯಕ ವ್ಯವಸ್ಥಾಪಕ ಗೌತಮ್ ಮನಿಲಾಲ್ ಬೋರಿಸಾ, ''ಈ ಸ್ಥಳಕ್ಕೆ ವೈದ್ಯರು ಸಹ ಬರುತ್ತಾರೆ. ಈ ಚಿಕಿತ್ಸೆಯು ಅವರ ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ, ಇದರಿಂದಾಗಿ ಯಾವುದೇ ಆತಂಕವಿಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡಬಹುದು ಎಂಬ ಕೆಲವು ವೈದ್ಯರು ಅಂದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ನಾನು ಈ ಅಭ್ಯಾಸದಿಂದ ಕಳೆದ ಭಾರಿ ಕೊರೊನಾದಿಂದ ಗುಣಮುಖನಾದೆ'' ಎಂದು ಹೇಳಿಕೊಂಡಿದ್ದಾರೆ.