ನವದೆಹಲಿ, ಮೇ 11 (DaijiworldNews/MB) : ಕಳೆದ ವರ್ಷದಂತೆ ಈ ವರ್ಷ ದೇಶದಾದ್ಯಂತ ಲಾಕ್ಡೌನ್ ಜಾರಿ ಮಾಡಿಲ್ಲ. ಹಾಗೆಯೇ ಯಾವುದೇ ಆತಂಕದ ಸ್ಥಿತಿಯೂ ಇಲ್ಲ. ಹೀಗಿರುವಾಗ ಆಹಾರ ಧಾನ್ಯಗಳ ಉಚಿತ ವಿತರಣೆಯ ಅವಶ್ಯಕತೆಯಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಮೂಲಕ ವಲಸಿಗರಿಗೆ ಉಚಿತ ಆಹಾದ ಧ್ಯಾನದ ವಿತರಣೆ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಕೇಂದ್ರ ಸರ್ಕಾರ, ''ಆದರೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಅಡಿಯಲ್ಲಿ ರೇಷನ್ ಕಾರ್ಡ್ ಹೊಂದಿರುವ 80 ಕೋಟಿ ಮಂದಿಗೆ ಮೇ-ಜೂನ್ ತಿಂಗಳಲ್ಲಿ, ಹೆಚ್ಚುವರಿ ಉಚಿತ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಗುತ್ತದೆ'' ಎಂದು ತಿಳಿಸಿದೆ.
ಈ ಬಗ್ಗೆ ವರ್ಚ್ಯುಯಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೇ, ''ಕಳೆದ ವರ್ಷ ಭಾರೀ ಪ್ರಮಾಣದಲ್ಲಿ ವಲಸಿಗರ ಬಿಕ್ಕಟ್ಟು ಕಾಣಿಸಿಕೊಂಡಿತ್ತು. ಲಾಕ್ಡೌನ್ನಿಂದ ವಲಸಿಗರು ಬಿಕ್ಕಟ್ಟಿನಲ್ಲಿದ್ದರು. ಆರೆ ಈ ವರ್ಷ ರಾಷ್ಟ್ರವ್ಯಾಪ್ತಿ ಲಾಕ್ಡೌನ್ ಇಲ್ಲ. ಸ್ಥಳೀಯ ಮಟ್ಟದಲ್ಲಿ ಮಾತ್ರ ಲಾಕ್ಡೌನ್ ಜಾರಿಯಲ್ಲಿದೆ. ಆದ್ದರಿಂದ ಯಾವುದೇ ಭಯದ ವಾತಾವರಣವಿಲ್ಲ'' ಎಂದು ಹೇಳಿದ್ದಾರೆ.
''ತಮ್ಮ ತಮ್ಮ ಊರುಗಳಿಗೆ ವಾಪಾಸ್ ತೆರಳಿರುವ ವಲಸಿಗರು ಅಲ್ಲಿಯೇ ರೇಷನ್ ಕಾರ್ಡ್ ಪಡೆದು ಉಚಿತ ಧಾನ್ಯ ಪಡೆಯುತ್ತಿದ್ದಾರೆ. ಹೀಗಾಗಿ ತೊಂದರೆ ಇಲ್ಲ'' ಎಂದು ಅವರು ಹೇಳಿದ್ದಾರೆ.
ಇನ್ನು ಈ ಸಂದರ್ಭದಲ್ಲೇ, ''ಪಿಎಂಜಿಕೆಎವೈ ನ ಅಡಿಯಲ್ಲಿ ಉಚಿತ ಧಾನ್ಯಗಳ ವಿತರಣೆಯ ಕಾರಣದಿಂದಾಗಿ ಆಹಾರ ಪದಾರ್ಥಗಳ ಬೆಲೆಯ ಮೇಲೆ ಯಾವುದೇ ಪರಿಣಾಮ ಇರುವುದಿಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸರ್ಕಾರ ಕಳೆದ ವರ್ಷ ವಲಸಿಗರಿಗೆ 6.40 ಲಕ್ಷ ಟನ್ಗಳಷ್ಟು ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಿತ್ತು.