ಬೆಳಗಾವಿ, ಮೇ.11 (DaijiworldNews/PY): ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕಠಿಣ ಲಾಕ್ಡೌನ್ ಹೇರಿದ್ದು, ಅಗತ್ಯವಿರುವ ಹಾಗೂ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಮಾತ್ರವೇ ಸಂಚರಿಸಲು ಅನುಮತಿ ನೀಡಲಾಗಿದೆ. ಏತನ್ಮಧ್ಯೆ ನಕಲಿ ಐಡಿ ಕಾರ್ಡ್ ದಂಧೆ ಬೆಳಕಿಗೆ ಬಂದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪ್ರಿಂಟಿಂಗ್ ಪ್ರೆಸ್ ಮಾಲೀಕ ವಿಶ್ವನಾಥ್ ಮುಚ್ಚಂಡಿ, ಗ್ರಾಫಿಕ್ ಡಿಸೈನರ್ ರೋಹಿತ್ ಕುಟ್ರೆ ಎಂದು ಗುರುತಿಸಲಾಗಿದೆ.
ಲಾಕ್ಡೌನ್ ಜಾರಿಯನ್ನೇ ಬಂಡವಾಳವಾಗಿಸಿಕೊಂಡ ಖದೀಮರು ನಕಲಿ ಐಡಿ ಕಾರ್ಡ್ ಮಾಡುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ವಿಕ್ರಂ ಆಮ್ಟೆ ನೇತೃತ್ವದಲ್ಲಿ ಕಡೋಲ್ಕರ್ ಗಲ್ಲಿಯ ಮುಚ್ಚಂಡಿ ಪ್ರಿಂಟರ್ಸ್ ಮೇಲೆ ದಾಳಿ ನಡೆಸಿದ್ದು, ಈ ಸಂದರ್ಭ ನಕಲಿ ಐಡಿ ಕಾರ್ಡ್ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.
ಆರೋಪಿಗಳು ಕೋ-ಆಪರೇಟಿವ್ ಸೊಸೈಟಿ, ಕಾರ್ಖಾನೆಗಳು, ಕ್ಯಾಟರಿಂಗ್, ಹಣಕಾಸು ಸಂಸ್ಥೆ ಹೆಸರಿನಲ್ಲಿ ನಕಲಿ ಐಡಿ ಕಾರ್ಡ್ಗಳನ್ನು ಮಾಡುತ್ತಿದ್ದರು. ನಕಲಿ ಐಡಿ ಕಾರ್ಡ್ಗಳನ್ನು ತೋರಿಸಿ ಹಲವು ಮಂದಿ ಅನಗತ್ಯವಾಗಿ ಸಂಚರಿಸುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಡಿಸಿಪಿ ವಿಕ್ರಂ ಆಮ್ಟೆ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳ ವಿರುದ್ದ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.