ನವದೆಹಲಿ, ಮೇ 11 (DaijiworldNews/MB) : ದೇಶದಲ್ಲಿ ಕೊರೊನಾ ಎರಡನೇ ಅಲೆಯಲ್ಲಿ ಸೋಂಕು ಹರಡುವ ತೀವ್ರತೆ ಅಧಿಕವಾಗಿದ್ದು ಏತನ್ಮಧ್ಯೆ ಆಕ್ಸಿಜನ್, ಬೆಡ್ ಮೊದಲಾದ ಸಮಸ್ಯೆಗಳು ಎದುರಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಸಂಸ್ಥೆಗಳು, ದೇಶಗಳು ಭಾರತಕ್ಕೆ ಸಹಾಯಹಸ್ತ ಚಾಚಿದೆ. ಈಗ ಸಾಮಾಜಿಕ ಮಾಧ್ಯಮ ಕಂಪನಿ ಟ್ವಿಟರ್ ಇಂಕ್ ಸುಮಾರು 110 ಕೋಟಿ ರೂ. (15 ಮಿಲಿಯನ್ ಡಾಲರ್) ಆರ್ಥಿಕ ನೆರವನ್ನು ಭಾರತಕ್ಕೆ ನೀಡುವುದಾಗಿ ಪ್ರಕಟಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಟ್ವಿಟರ್ ಇಂಕ್ನ ಸಿಇಒ ಜಾಕ್ ಪ್ಯಾಟ್ರಿಕ್, ''ಭಾರತದಲ್ಲಿನ ಕೊರೊನಾ ಬಿಕ್ಕಟ್ಟನ್ನು ಪರಿಹರಿಸಲು ಕೇರ್ ಸಂಸ್ಥೆ, ಏಡ್ ಇಂಡಿಯಾ ಸಂಸ್ಥೆ ಹಾಗೂ ಸೇವಾ ಸಂಸ್ಥೆಗೆ 15 ಮಿಲಿಯನ್ ಡಾಲರ್ ಹಂಚಿಕೆ ಮಾಡಲಾಗಿದೆ'' ಎಂದು ತಿಳಿಸಿದ್ದಾರೆ.
ಇನ್ನು ಕೇರ್ ಸಂಸ್ಥೆಗೆ 73 ಕೋಟಿ ರೂ., ಏಡ್ ಇಂಡಿಯಾ ಹಾಗೂ ಸೇವಾ ಸಂಸ್ಥೆಗಳಿಗೆ ತಲಾ 17 ಕೋಟಿ ರೂ. ಯನ್ನು ಭಾರತದ ಕೊರೊನಾ ಬಿಕ್ಕಟ್ಟಿನ ಸಹಾಯಕ್ಕೆ ಟ್ವಿಟರ್ ಇಂಕ್ ನೀಡಿದೆ. ಇನ್ನು ಈ ಮೂರು ಸಂಸ್ಥೆಗಳು ಲಸಿಕೆ, ಆಮ್ಲಜನಕ ಸೇರಿದಂತೆ ತುರ್ತು ವೈದ್ಯಕೀಯ ನೆರವಿಗೆ ಈ ದೇಣಿಗೆಯನ್ನು ಬಳಸಲಿದೆ.