ಉತ್ತರ ಪ್ರದೇಶ, ಮೇ.11 (DaijiworldNews/PY): ಕೊರೊನಾ ನಿಯಮ ಉಲ್ಲಂಘಿಸಿ ಮುಸ್ಲಿಂ ಧರ್ಮಗುರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಸಾವಿರಕ್ಕೂ ಅಧಿಕ ಮಂದಿಯ ವಿರುದ್ದ ಕೊರೊನಾ ನಿಯಮ ಉಲ್ಲಂಘನೆಯಡಿ ಎಫ್ಐಆರ್ ದಾಖಲಾಗಿದೆ.
ಉತ್ತರಪ್ರದೇಶದ ಬದೌನ್ ಜಿಲ್ಲೆಯ ಓಲ್ಡ ಸಿಟಿಯ ಮುಸ್ಲಿಂ ಧರ್ಮಗುರು ಅಬ್ದುಲ್ ಹಮೀದ್ ಮೊಹಮ್ಮದ್ ಸಲಿಮುಲ್ ರವಿವಾರ ಮೃತಪಟ್ಟಿದ್ದರು. ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಅಂತ್ಯಕ್ರಿಯೆಯನ್ನು ಸರಳವಾಗಿ ನಡೆಸಬೇಕಿತ್ತು. ಆದರೆ, ಅಂತ್ಯಸಂಸ್ಕಾರಕ್ಕೆ ಸಾವಿರಾರು ಮಂದಿ ಆಗಮಿಸಿದ್ದರು.
"ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕಾಗಿ ಮಸೀದಿಯಲ್ಲಿ ಇಡಲಾಗಿತ್ತು. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಶವಯಾತ್ರೆ ಮಾಡಲಾಗಿತ್ತು. ಈ ಸಂದರ್ಭ ಸಲಿಮುಲ್ ಅವರ ಬೆಂಬಲಿಗರು ಹಾಗೂ ಸಾವಿರಾರು ಮಂದಿ ಶವಯಾತ್ರೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಹಲವಾರು ಮಂದಿ ಕೊರೊನಾ ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದಾರೆ" ಎಂದು ಪೊಲೀಸರು ಹೇಳಿದ್ದಾರೆ.
"ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿರುವ ಕಾರಣ ಸಾವಿರಕ್ಕೂ ಅಧಿಕ ಮಂದಿಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಅಂತ್ಯಸಂಸ್ಕಾರದ ವಿಡಿಯೋ ನೋಡಿ ಜನರ ಗುರುತು ಪತ್ತೆ ಮಾಡಲಾಗುತ್ತಿದೆ" ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.