ಬೆಂಗಳೂರು, ಮೇ 11 (DaijiworldNews/MB) : ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಆಕ್ಸಿಜನ್ಗಾಗಿ ಪರದಾಡುತ್ತಿರುವವರ ಕೊರೊನಾ ಸೋಂಕಿತರಿಗೆ ನೆರವಾಗಲು ಚೆನ್ನೈ ಮಾದರಿಯಲ್ಲಿ ಮೊಬೈಲ್ ಆಕ್ಲಿಜನ್ ವ್ಯವಸ್ಥೆ ಮಾಡಲಾಗುವುದು ಎಂದು ಗೃಹ ಸಚಿವ ಬಸರವಾಜ ಬೊಮ್ಮಾಯಿಯವರು ಸೋಮವಾರ ಹೇಳಿದ್ದಾರೆ.
ಸೋಮವಾರ ಬೆಂಗಳೂರಿನ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬೆಂಗಳೂರು ಪೂರ್ವವಲಯದ ಕೊರೊನಾ ಪರಿಸ್ಥಿತಿ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ಗೃಹ ಸಚಿವ ಬಸರವಾಜ ಬೊಮ್ಮಾಯಿಯವರು ಮಾತುಕತೆ ನಡೆಸಿದ್ದಾರೆ.
ಬಳಿಕ ಮಾತನಾಡಿದ ಅವರು, ''ಬಸ್ಸುಗಳಲ್ಲಿ ತುರ್ತು ಸಂದರ್ಭಗಳಲ್ಲಿ ಸೋಂಕಿತರಿಗೆ ಆಕ್ಸಿಜನ್ ನೀಡಲಾಗುವಂತೆ ಚೆನ್ನೈನಲ್ಲಿ ಒಂದು ಖಾಸಗಿ ಸಂಸ್ಥೆ ಮೊಬೈಲ್ ಆಕ್ಸಿಜನ್ ಪೂರೈಕೆ (ಆಕ್ಸಿಜನ್ ಆನ್ ವೀಲ್ಸ್) ಕೆಲಸ ಮಾಡುತ್ತಿದೆ. ಇಲ್ಲಿಯೂ ಅದೇ ಮಾದರಿಯಲ್ಲಿ ಮಾಡಲು ನಮ್ಮ ಉದ್ದೇಶ. ಹಾಗೆಯೇ ಅಗತ್ಯವಿರುವ ಸೋಂಕಿತರ ಮನೆಗಳಿಗೂ ಆಕ್ಸಿಜನ್ ಕಳಿಸುವ ವ್ಯವಸ್ಥೆ ಮಾಡಲು ಗಂಭೀರ ಚಿಂತನೆ ನಡೆಸಲಾಗುತ್ತಿದೆ'' ಎಂದು ತಿಳಿಸಿದರು.
ಇನ್ನು ಈ ಸಂದರ್ಭದಲ್ಲೇ ಮೊಬೈಲ್ ಬ್ಲಾಕಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ''ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಸಿಸಿಬಿ ತನಿಖೆ ನಡೆಸುತ್ತಿದೆ'' ಎಂದು ಹೇಳಿದರು.
''ಹಾಗೆಯೇ ಯಾರು ದುಡ್ಡಿಗಾಗಿ ಬೆಡ್ ಬ್ಲಾಕಿಂಗ್ ಮಾಡಿದ್ದರೋ ಅವರಿಗೆ ತಕ್ಕ ಶಿಕ್ಷೆ ನೀಡಲಾಗುತ್ತದೆ. ಇದರಲ್ಲಿ ಯಾವುದೇ ರಾಜಿಯಿಲ್ಲ'' ಎಂದು ಕೂಡಾ ಹೇಳಿದರು.