ಆಂಧ್ರಪ್ರದೇಶ, ಮೇ 11(DaijiworldNews/MS): ಆಮ್ಲಜನ ಪೂರೈಕೆಯಲ್ಲಿ ವ್ಯತ್ಯಯವಾದ ಪರಿಣಾಮ 11 ಜನ ಕೋವಿಡ್ ಸೋಂಕಿತರು ಸಾವನ್ನಪ್ಪಿರುವ ದುರಂತ ಘಟನೆ ಆಂಧ್ರ ಪ್ರದೇಶದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.
ರಾಯಲಸೀಮಾ ಪ್ರದೇಶದ ಅತಿದೊಡ್ಡ ತಿರುಪತಿಯ ಶ್ರೀ ವೆಂಕಟೇಶ್ವರ ರಾಮನಾರಾಯಣ ರೂಯಾ ಸರ್ಕಾರಿ ಜನರಲ್ ಆಸ್ಪತ್ರೆಯ ಐಸಿಯುನಲ್ಲಿ ಇದ್ದ ಹನ್ನೊಂದು ಕೊರೊನಾ ರೋಗಿಗಳು ಸೋಮವಾರ ಸಂಜೆ ಆಕ್ಸಿಜನ್ ಟ್ಯಾಂಕರ್ ಕೆಲವೇ ನಿಮಿಷ ತಡವಾದ ಹಿನ್ನಲೆಯಲ್ಲಿ ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ್ದಾರೆ.
ಜಿಲ್ಲಾಧಿಕಾರಿ ಎಂ.ಹರಿನಾರಾಯಣ ಮಾತನಾಡಿ, ನಮ್ಮ ಹಲವಾರು ಪ್ರಯತ್ನದ ಬಲಿಕವೂ ಆಮ್ಲಜನಕದ ಬೆಂಬಲದಲ್ಲಿದ್ದ 11 ಜನರು ಸಾವನ್ನಪ್ಪಿದರು. ಖಾಲಿಯಾಗಿದ್ದ ಆಕ್ಸಿಜನ್ ರಿಫೀಲಿಂಗ್ ಮಾಡುತ್ತಿದ್ದ ವೇಳೆ ಕೇವಲ 5 ನಿಮಿಷದ ಅವಧಿಯಲ್ಲಿ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯವಾಗಿ ಈ ದುರಂತ ಸಂಭವಿಸಿದೆ. ರೋಗಿಗಳನ್ನು ಉಳಿಸಲು 30 ವೈದ್ಯರು ತಕ್ಷಣವೇ ಐಸಿಯುಗೆ ಧಾವಿಸಿದರು. ಹೀಗಾಗಿ ಅಲ್ಲಿದ್ದ ಹಲವಾರು ಜನರನ್ನು ಉಳಿಸಲು ಸಾಧ್ಯವಾಯಿತು. ಐದು ನಿಮಿಷದಲ್ಲಿ ಮತ್ತೆ ಆಕ್ಸಿಜನ್ ಪುನಃ ಪೂರೈಕೆ ಪ್ರಾರಂಭಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
ತಿರುಪತಿ, ಚಿತ್ತೂರು, ನೆಲ್ಲೂರು ಮತ್ತು ಕಡಪ ಪ್ರದೇಶದ ಸುಮಾರು 1,000ಕ್ಕೂ ಹೆಚ್ಚು ಕೋವಿಡ್ ರೋಗಿಗಳು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾತ್ರಿ 8: 30 ರ ನಂತರ ಆಮ್ಲಜನಕದ ಒತ್ತಡ ಕಡಿಮೆಯಾಗಲು ಪ್ರಾರಂಭಿಸಿತು ಈ ಸರಬರಾಜನ್ನು ಪುನಃಸ್ಥಾಪಿಸುವ ಮೊದಲು ಕೆಲವೇ ನಿಮಿಷಗಳಲ್ಲಿ ರೋಗಿಗಳು ಸಾವನ್ನಪ್ಪಿದ್ದಾರೆ. ಇದರಿಂದ ಕೋಪಗೊಂಡ ಸಂಬಂಧಿಕರು ಕೋವಿಡ್ ಐಸಿಯುಗೆ ನುಗ್ಗಿ, ದಾಂಧಲೆ ನಡೆಸಿದ್ದಾರೆ.
ಇನ್ನು ಘಟನೆ ಕುರಿತು ಸಮಗ್ರ ತನಿಖೆಗೆ ಆದೇಶಿಸಿರುವ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ತಪ್ಪಿತಸ್ತರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.