ತಿರುವನಂತಪುರಂ, ಮೇ 10 (DaijiworldNews/MB) : ಹತ್ರಾಸ್ ಪ್ರಕರಣದ ಸಂತ್ರಸ್ತೆಯ ಕುಟುಂಬಸ್ಥರನ್ನು ಭೇಟಿಯಾಗಲು ತೆರಳುತ್ತಿದದದ ಸಂದರ್ಭ ಕಳೆದ ವರ್ಷದ ಅಕ್ಟೋಬರ್ನಲ್ಲಿ ಬಂಧನಕ್ಕೆ ಒಳಗಾಗಿರುವ ಕೇರಳದ ಪತ್ರಕರ್ತ ಸಿದ್ದೀಖ್ ಕಪ್ಪನ್ ಅವರ ಪತ್ನಿ ರೈಹಾನತ್ ಸಿದ್ದೀಖ್ ಅವರು ಉತ್ತರ ಪ್ರದೇಶ ಸರಕಾರಕ್ಕೆ ರವಿವಾರ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿದ್ದಾರೆ.
ಎಪ್ರಿಲ್ 28ರಂದು ಸುಪ್ರೀಂ ಕೋರ್ಟ್ ಸಿದ್ದೀಖ್ ಕಪ್ಪನ್ ಅವರಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಆದೇಶವನ್ನು ನೀಡಿದೆ. ಆದರೆ ಈ ಆದೇಶವನ್ನು ಉತ್ತರ ಪ್ರದೇಶ ಸರಕಾರ ಪಾಲಿಸಿಲ್ಲ ಎಂದು ಹೇಳಿ ಸಿದ್ದೀಖ್ ಪತ್ನಿ ರೈಹಾನತ್ ಅವರು ಈ ನೋಟಿಸ್ ಅನ್ನು ತಮ್ಮ ವಕೀಲ ವಿಲ್ಸ್ ಮ್ಯಾಥ್ಯೂಸ್ ಮೂಲಕ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ಉತ್ತರ ಪ್ರದೇಶ ಸರ್ಕಾರ ಸಿದ್ದೀಖ್ ಅವರನ್ನು ಎಪ್ರಿಲ್ 30 ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿದೆ. ಆದರೆ ಸಿದ್ದೀಖ್ ಅವರು ಕೊರೊನಾ ಸೋಂಕಿನಿಂದ ಗುಣಮುಖರಾಗಿಲ್ಲದಿದ್ದರೂ ಮೇ 7 ರಂದು ಮತ್ತೆ ಆಸ್ಪತ್ರೆಯಿಂದ ಮಥುರಾ ಜೈಲಿನ ಐಸೊಲೇಶ್ ವಾರ್ಡ್ಗೆ ಸ್ಥಳಾಂತರ ಮಾಡಿದೆ. ಅಷ್ಟೇ ಅಲ್ಲದೆ ಸುಪ್ರೀಂ ಕೋರ್ಟ್ಗೆ ದಾರಿ ತಪ್ಪಿಸುವ ಮಾಹಿತಿಯನ್ನು ಉತ್ತರ ಪ್ರದೇಶ ಸರ್ಕಾರ ಉದ್ದೇಶಪೂರ್ವಕವಾಗಿ ನೀಡಿದೆ ಎಂದು ನೋಟಿಸ್ನಲ್ಲಿ ಸಿದ್ದೀಖ್ ಪತ್ನಿ ಆರೋಪ ಮಾಡಿದ್ದಾರೆ.
ಇನ್ನು ಕೇರಳದಿಂದ ಕಪ್ಪನ್ ಅವರ ಪುತ್ರ ಮೇ 1 ರಂದು ಬಂದಿದ್ದರೂ ನಿಯಮಗಳ ನೆಪ ಹೇಳಿ ತಂದೆ, ಮಗನ ಭೇಟಿಗೆ ಅವಕಾಶ ನೀಡಲ್ಲ ಎಂದು ದೂರಲಾಗಿದೆ.
ಕಪ್ಪನ್ ನನ್ನಲ್ಲಿ ದೂರವಾಣಿ ಮೂಲಕ ಮಾತನಾಡಿದ್ದಾರೆ. ನನ್ನನ್ನು ಮೇ 7 ರಂದು ಬೆಳಿಗ್ಗೆ 2:30 ಗಂಟೆಗೆ ಜೈಲಿಗೆ ಕರೆತರಲಾಗಿದೆ. ಯಾವುದೇ ಆಹಾರವನ್ನೂ ನೀಡಿಲ್ಲ. ಉತ್ತಮವಲ್ಲದ ಸ್ಥಳದಲ್ಲಿ ಇರಿಸಿದ್ದಾರೆ ಎಂದು ಹೇಳಿರುವುದಾಗಿ ಕಪ್ಪನ್ ಪತ್ನಿ ತಿಳಿಸಿದ್ದಾರೆ.
ಕಪ್ಪನ್ ಅವರು ಮಧುಮೇಹದಿಂದ ಬಳಲುತ್ತಿರುವ ಹಿನ್ನೆಲೆ ಅವರನ್ನು ಏಮ್ಸ್ ಆಸ್ಪತ್ರೆಗೆ ಅಥವಾ ದೆಹಲಿಯ ಯಾವುದೇ ಉತ್ತಮ ಆಸ್ಪತ್ರೆಗೆ ದಾಖಲು ಮಾಡಿ ಎಂದು ಆಗ್ರಹಿಸಿದ್ದಾರೆ.