ಶಿವಮೊಗ್ಗ, ಮೇ.10 (DaijiworldNews/PY): "ದುಡಿಯುವ ವರ್ಗಕ್ಕೆ 10 ಸಾವಿರ ರೂ. ಪರಿಹಾರ ನೀಡಲು ನಾವೇನು ದುಡ್ಡು ಪ್ರಿಂಟ್ ಮಾಡುತ್ತೇವಾ?" ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮೊದಲು ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು 14 ದಿನ ಬಾಯಿಗೆ ಬೀಗ ಹಾಕಿಕೊಳ್ಳಬೇಕು. ಅವರು ಬಾಯಿಗೆ ಬೀಗ ಹಾಕಿಕೊಂಡರೆ ಲಾಕ್ಡೌನ್ ಯಶಸ್ವಿಯಾಗುತ್ತದೆ. ಬಳಿಕ ನಾವು ನೀವು ಯಾವ ಭಾಷೆಯಲ್ಲಿ ಬೇಕಾದರು ಮಾತನಾಡಿಕೊಳ್ಳೋಣ" ಎಂದಿದ್ದಾರೆ.
"ರಾಜ್ಯದಲ್ಲಿ ಜನರು ಸೋಂಕಿಗೆ ತುತ್ತಾಗಿ ಬಲಿಯಾಗುತ್ತಿದ್ದಾರೆ ಈ ವೇಳೆಯಲ್ಲಿ ಬಾಯಿಗೆ ಬಂದಂತೆ ಟೀಕೆ ಮಾಡುತ್ತಿದ್ದಾರೆ. ಟೀಕೆ ಮಾಡುವುದಕ್ಕೆ ವಿರೋಧ ಪಕ್ಷ ಇದೆ ಎನ್ನುವಂತಾಗಿದೆ. ಒಳ್ಳೆಯದಕ್ಕೆ ನೀವು ಒಂದಾದರೂ ಅಭಿನಂದನೆ ಸಲ್ಲಿಸಿದ್ದೀರಾ?" ಎಂದು ಪ್ರಶ್ನಿಸಿದ್ದಾರೆ.
"ನೂರು ವರ್ಷದ ಬಳಿಕ ಈ ಕಾಯಿಲೆ ಬಂದಿದೆ. ಇಂತಹ ಕಾಯಿಲೆ ಬರುತ್ತದೆ ಎಂದು ನಾವು ಯಾರೂ ಕೂಡಾ ಊಹಿಸಿಯೇ ಇರಲಿಲ್ಲ. ಟೀಕೆ ಮಾಡುವುದು ವಿಪಕ್ಷದ ಕರ್ತವ್ಯವಾಗಿದೆ. ಆದರೆ, ಬಾಯಿಗೆ ಬಂದಂತೆ ಟೀಕಿಸುವುದು ಸರಿಯಲ್ಲ" ಎಂದು ಕಿಡಿಕಾರಿದ್ದಾರೆ.